ಡೈಲಿ ವಾರ್ತೆ:16 ಫೆಬ್ರವರಿ 2023
ಸಕಲೇಶಪುರ: ಕಾಡ್ಗಿಚ್ಚು ನಂದಿಸಲು ಹೋದ ಅರಣ್ಯ ಸಿಬಂದಿಗಳಿಬ್ಬರು ಚಿಂತಾಜನಕ
ಸಕಲೇಶಪುರ : ಕಾಡ್ಗಿಚ್ಚನ್ನು ನಂದಿಸಲು ಹೋದ ಆರು ಜನ ಅರಣ್ಯ ಇಲಾಖೆ ಸಿಬಂದಿಗಳಲ್ಲಿ ಇಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ತಾಲೂಕಿನ ಕಾಡುಮನೆ ಸಮೀಪ ಗುರುವಾರ ನಡೆದಿದೆ.
ಕಾಡುಮನೆ ಸಮೀಪ ಮಣಿಬೀಡು ದೇವಸ್ಥಾನದ ಸಮೀಪವಿರುವ ಪಶ್ಚಿಮ ಘಟ್ಟದ ಕಾಡಿನಲ್ಲಿ ಅಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಹೋದ ಅರಣ್ಯ ಇಲಾಖೆಯ ಸಿಬಂದಿಗಳು ಬೆಂಕಿಗೆ ಸಿಲುಕಿಕೊಂಡ ಪರಿಣಾಮ ಫಾರೆಸ್ಟರ್ ಮಂಜುನಾಥ್, ಅರಣ್ಯ ರಕ್ಷಕ ಸುಂದರೇಶ್ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಅರಣ್ಯ ವೀಕ್ಷಕ ತುಂಗೇಶ್ ಹಾಗೂ ಮಹೇಶ್ ಗೆ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಗುರುವಾರ ಮಧ್ಯಾಹ್ನ ಸುಮಾರು 1.30 ರ ವೇಳೆಯಲ್ಲಿ ಈ ಘಟನೆ ನಡೆದಿದೆ. ಬೆಂಕಿಯಲ್ಲಿ ಕಾಡಿನ ನಡುವೆ ಸಿಲುಕಿದ ಅರಣ್ಯ ಇಲಾಖೆ ಸಿಬಂದಿಗಳು ಕಾಡಿನಿಂದ ಗ್ರಾಮಸ್ಥರು ಹಾಗೂ ಇತರ ಅರಣ್ಯ ಇಲಾಖೆ ಸಿಬಂದಿಗಳ ನೆರವಿನಿಂದ ಸುಮಾರು 12 ಕಿ.ಮೀ ದೂರ ಗಾಯಾಳುಗಳನ್ನು ಎತ್ತಿಕೊಂಡು ಬಂದು ನಂತರ ಆ್ಯಂಬುಲೆನ್ಸ್ ಮುಖಾಂತರ ಪಟ್ಟಣದ ಕ್ರಾಫರ್ಡ್ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದು ಹಾಸನದ ಜಿಲ್ಲಾಸ್ಫತ್ರೆಗೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.