ಡೈಲಿ ವಾರ್ತೆ:24 ಫೆಬ್ರವರಿ 2023
ಚಿರತೆ ಹಿಡಿಯಲೆಂದು ಬೋನಿನೊಳಗೆ ಕೋಳಿ ಇಟ್ಟರೆ…ಅದಕ್ಕೆ ಕನ್ನ ಹಾಕಲು ಹೋಗಿ ತಾನೇ ಬಂಧಿಯಾದ
ಉತ್ತರಪ್ರದೇಶ: ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಹಳ್ಳಿಯೊಂದರಲ್ಲಿ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲೆಂದು ಬೋನು ಇಟ್ಟರೆ ಚಿರತೆ ಬದಲು ವ್ಯಕ್ತಿಯೊಬ್ಬ ಬಂಧಿಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಘಟನೆ ವಿವರ: ಉತ್ತರ ಪ್ರದೇಶದ ಬುಲಂದ್‌ಶಹರ್ ಸುತ್ತಮುತ್ತ ಚಿರತೆಗಳ ಸಂಚಾರ ಹೆಚ್ಚಿತ್ತು ಅಲ್ಲದೆ ಗ್ರಾಮದ ಸಾಕು ಪ್ರಾಣಿಗಳು ಈ ಚಿರತೆಯ ಆಹಾರವಾಗಿತ್ತು ಇದರಿಂದ ರೋಸಿಹೋದ ಗ್ರಾಮಸ್ಥರು ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ, ಗ್ರಾಮದ ಜನರ ಮನವಿಗೆ ಎಚ್ಚೆತ್ತ ಅರಣ್ಯ ಇಲಾಖೆ ಗ್ರಾಮಕ್ಕೆ ತಂಡದೊಂದಿಗೆ ಬಂದು ಇಡೀ ಗ್ರಾಮ ಹುಡುಕಾಡಿದರೂ ಚಿರತೆ ಪತ್ತೆಯಾಗಿಲ್ಲ ಹಾಗಂತ ಚಿರತೆ ಇಲ್ಲ ಎಂದು ಬಿಟ್ಟು ಹೋಗುವ ಹಾಗಿಲ್ಲ ಅದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನ್ ಇರಿಸಿದ್ದಾರೆ, ಆದರೆ ಬರೇ ಬೋನ್ ಇಟ್ಟರೆ ಚಿರತೆ ಬರುವುದಿಲ್ಲ ಎಂದು ಬೋನ್ ಒಳಗೆ ಒಂದು ಕೋಳಿಯನ್ನು ಇರಿಸಿದ್ದಾರೆ.
ಕೋಳಿಯನ್ನು ನೋಡಿ ಚಿರತೆ ಬೋನ್ ಒಳಗೆ ಬರಬಹುದು ಎಂದು ಹೋದ ಸಿಬ್ಬಂದಿಗಳು ಮರುದಿನ ಬೆಳಿಗ್ಗೆ ಬೋನ್ ಬಳಿ ಬಂದು ಚಿರತೆ ಬಿದ್ದಿದೆಯಾ ಎಂದು ನೋಡಿದರೆ ಬೋನ್ ಒಳಗೆ ಚಿರತೆ ಬದಲು ವ್ಯಕ್ತಿ ಸಿಲುಕಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಹೊರಗೆ ಎಳೆದು ವಿಚಾರಿಸಿದಾಗ ತಾನು ಬೋನ್ ಒಳಗೆ ಇಟ್ಟ ಕೋಳಿಯನ್ನು ಕೊಂಡೊಯ್ಯಲು ಬಂದಿರುವುದಾಗಿ, ಬಳಿಕ ಬೋನ್ ಬಾಗಿಲು ಬಿದ್ದು ಬಂಧಿಯಾದೆ ಹಲವು ಭಾರಿ ರಕ್ಷಿಸುವಂತೆ ಕರೆದರೂ ಯಾರೂ ಬರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೊನೆಗೂ ಚಿರತೆ ಮಾತ್ರ ಸಿಗಲೇ ಇಲ್ಲ… ಕಾರ್ಯಾಚರಣೆ ಮುಂದುವರೆದಿದೆ.