ಡೈಲಿ ವಾರ್ತೆ:26 ಫೆಬ್ರವರಿ 2023
ಉಡುಪಿ ಪುತ್ತೂರಿನಲ್ಲಿ ಆದಿವಾಸಿ ಸಮುದಾಯ ಭವನ ಉದ್ಘಾಟನೆ:
ಕೊರಗರಿಗೆ ಒಳಮೀಸಲಾತಿಗಿಂತ ಪ್ರತ್ಯೇಕ ಮೀಸಲಾತಿ ಅಗತ್ಯ: ಜಯಪ್ರಕಾಶ್ ಹೆಗ್ಡೆ
ಉಡುಪಿ: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕೊರಗ ಸಮುದಾಯದ ಮಕ್ಕಳು ಪರಿಶಿಷ್ಟ ಪಂಗಡದ ಇತರ ಮಕ್ಕಳ ಜೊತೆ ಕೂಡ ಸ್ಪರ್ಧೆ ಮಾಡಲು ಇಂದಿಗೂ ಆಗುತ್ತಿಲ್ಲ. ಆದುದರಿಂದ ಈ ಸಮುದಾಯಕ್ಕೆ ಒಳ ಮೀಸಲಾತಿಗಿಂತ ಪರಿಶಿಷ್ಟ ಪಂಗಡದಲ್ಲಿಯೇ ಪ್ರಾಚೀನ ಬುಡಕಟ್ಟು ಎಂಬುದಾಗಿ ಪ್ರತ್ಯೇಕ ಮಾಡಿ ಮೀಸಲಾತಿ ನೀಡಬೇಕಾಗಿದೆ. ಇದರಿಂದ ಕೊರಗ ಮಕ್ಕಳಿಗೆ ಹೆಚ್ಚಿನ ಅನುಕೂಲ ದೊರೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ನಗರಸಭೆ ಹಾಗೂ ಕೊರಗ ಸಂಘಟನೆಗಳ ಸಹಯೋಗದೊಂದಿಗೆ ಉಡುಪಿ ಪುತ್ತೂರಿನಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಆದಿವಾಸಿ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡಿದರು.
ಕೊರಗ ಸಮುದಾಯ ಪರಿಶಿಷ್ಟ ಪಂಗಡದಲ್ಲಿದ್ದರೂ ಕಟ್ಟಕಡೆಯ ಸಮುದಾಯವಾಗಿ ಬಹಳಷ್ಟು ನೋವು ಅನುಭವಿಸಿದೆ. ಪರಿಶಿಷ್ಟ ಪಂಗಡದ ಹೆಚ್ಚಿನವರಿಗೆ ಈಗಾಗಲೇ ಶಿಕ್ಷಣ, ಉದ್ಯೋಗ ದೊರೆಕಿದೆ. ಆದರೆ ಇನ್ನು ಸರಿಯಾಗಿ ಮೀಸಲಾತಿ ಸೌಲಭ್ಯ ದೊರೆಯದ ಕೊರಗ ಸಮುದಾಯಕ್ಕೆ ಇನ್ನಷ್ಟು ಆದ್ಯತೆ ಕೊಡಬೇಕಾಗಿದೆ. ಸರಕಾರ ಈ ಬದಲಾವಣೆ ಬಗ್ಗೆ ತೀರ್ಮಾನ ಮಾಡಬೇಕು. ಅಲ್ಲದೆ ಇದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಉಳಿದ ಸಮುದಾಯದವರು ಕೂಡ ಕೈಜೋಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕೊರಗರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಈ ಮೂಲಕ ಸಾಮಾನ್ಯ ಮಕ್ಕಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ತಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ಕೊಡುವ ವ್ಯವಸ್ಥೆ ಆಗದಿದ್ದರೆ ಪರಿಶಿಷ್ಟ ಪಂಗಡದ ಉಳಿದ ಸಮುದಾಯದೊಂದಿಗೆ ಕೊರಗ ಮಕ್ಕಳಿಗೆ ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಕೊರಗ ಸಮುದಾಯದವರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಬೇಕು, ಜಿಲ್ಲೆಯಲ್ಲಿ ಆಶ್ರಮ ಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಉತ್ತಮ ಶಿಕ್ಷಣ ಸೌಲಭ್ಯಗಳಿದ್ದು, ತಮ್ಮ ಮಕ್ಕಳನ್ನು ಅಲ್ಲಿಗೆ ಸೇರ್ಪಡೆ ಮಾಡಬೇಕು. ಸಮುದಾಯದ ಸಮಗ್ರ ಅಧ್ಯಯನ ಕುರಿತಂತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಇವರ ಸಮಗ್ರ ಶ್ರೇಯೋಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದರು.
ಸಮುದಾಯ ಭವನವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಗಳನ್ನು ಶಾಸಕರು ವಿತರಿಸಿದರು. ಅಧ್ಯಕ್ಷತೆಯನ್ನು ಉಡುಪಿ ನಗರಸಭೆ ಅಧ್ಯಕ್ಷೆ ಸಮಿತ್ರಾ ನಾಯಕ್ ವಹಿಸಿದ್ದರು.
ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ಉಡುಪಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಇಂಜಿನಿಯರ್ ರಾಮು ವೈ.ಎಚ್., ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ಕೊರಗ ಸಮುದಾಯುದ ಮುಖಂಡರಾದ ಬಾಬು ಪಾಂಗಾಳ, ಬೊಗ್ರ ಕೊರಗ, ಸಂಜೀವ ಕೊರಗ, ಸುಶೀಲ ನಾಡ, ಗೌರಿ ಕೊರಗ, ಗಣೇಶ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿ ಕಾರಿ ದೂದ್‌ಪೀರ್ ಪಿ. ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.