ಡೈಲಿ ವಾರ್ತೆ:28 ಫೆಬ್ರವರಿ 2023

ಕೋಟ ಪಂಚಾಯತ್ ಗ್ರಾಮಸಭೆ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ್ದಕ್ಕೆ ಆಕ್ರೋಶ!

ಕೋಟ: ಕೋಟ ಗ್ರಾಮ ಪಂಚಾಯಿತಿ ಗ್ರಾಮಸಭೆ ಸೋಮವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಜಲಜೀವನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಬಗ್ಗೆ ಉಲ್ಲೇಖಿಸಲಾಗುತ್ತದೆ. ಆದರೆ ಮೂಡುಗಿಳಿಯಾರು ಪರಿಸರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಬಂದೊದಗುತ್ತಿದೆ. ಇದ್ದ ಬಾವಿಯಲ್ಲಿ ನೀರಿಲ್ಲ, ಕಂಡಕಂಡಲ್ಲಿ ಜಲಜೀವನ್ ಯೋಜನೆಯ ಪೈಪ್ ಅಳವಡಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಗುತ್ತಿಗೆದಾರ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ಹಣ ಪಡೆಯುವ ಉದ್ದೇಶ ಹೊಂದಿದ್ದಾರೆ. ಸಂಬಂಧಿತ ಪ್ರದೇಶದಲ್ಲಿ ಸಮರ್ಪಕ ಬಾವಿ ನಿರ್ಮಿಸಿ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ್ ಗಿಳಿಯಾರು ಆಗ್ರಹಿಸಿದರು.

ಕೋಟ ಹೋಬಳಿ ಪ್ರದೇಶದ ರೈತ ಸಂಪರ್ಕ ಕೇಂದ್ರದಲ್ಲಿ ಕಾಯಂ ಅಧಿಕಾರಿಗಳಿಲ್ಲ, ಸಿಬ್ಬಂದಿ ಇಲ್ಲ. ಕೋಟ ಪಶು ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ. ಚರ್ಮಗಂಟು ರೋಗ ಉಲ್ಬಣಿಸುತ್ತಿದ್ದು, ಶೀಘ್ರ ವೈದ್ಯರನ್ನು, ಸಿಬ್ಬಂದಿ ನೇಮಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಅಂಗನವಾಡಿಯಲ್ಲಿ ಶಿಕ್ಷಕಿಯರು ಇರುವುದಿಲ್ಲ, ಹಾಗಾದರೆ ಅಂಗನವಾಡಿ ಏಕೆ ಬೇಕು ಎಂದು ಸುರೇಶ್ ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಮೀನಾಕ್ಷಿ, ಪ್ರಸ್ತುತ ಸರ್ಕಾರದ ಕೆಲವೊಂದು ಕಾರ್ಯನಿರ್ವಹಿಸಲು ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯವಾಗಲಿದ್ದು, ಸಮಸ್ಯೆ ಬಗೆಹರಿಯಲಿದೆ ಎಂದರು.

ತಾಲೂಕು ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಮಣೂರು ಭಾಸ್ಕರ್ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೆ ಪುರಸ್ಕೃತ ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಸ್ಥಳೀಯ ಕನ್ನಡ ವ ಮಾಧ್ಯಮ ಶಾಲೆಗಳಿಗೆ ಉಚಿತವಾಗಿ ತರಕಾರಿ ಇನ್ನಿತರ ಪರಿಕರ ನೀಡುವ ಹರ್ತಟ್ಟು ಮಂಜುನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಗ್ರಾ ಪಂ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕೋಟ ಪಶು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ ನೋಡೆಲ್‌ ಅಧಿಕಾರಿಯಾಗಿದ್ದರು. ಪಿಡಿಒ ಸುರೇಶ್ ಸ್ವಾಗತಿಸಿದರು. ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್‌ ಸಿ.ಕುಂದ‌, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ತಿಕ್‌, ಗ್ರಾಪಂ ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸದಸ್ಯರಾದ ಶಾರದಾ ಆರ್.ಕಾಂಚನ್, ವನೀತಾ ಎಸ್.ಆಚಾರ್ಯ, ಶಾಂತಾ, ಲೆಕ್ಕ ಸಹಾಯಕ ಶೇಖ‌ ಮರವಂತೆ, ಪ್ರಭಾರ ಲೆಕ್ಕಸಹಾಯಕಿ ಪೂರ್ಣಿಮಾ ಇದ್ದರು.