ಡೈಲಿ ವಾರ್ತೆ:04 ಮಾರ್ಚ್ 2023
ಕೊಲ್ಹಾರ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪತ್ತೆ
ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಶನಿವಾರ ಕೃಷ್ಣಾ ನದಿ ಸೇತುವೆ ಮೇಲೆ ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಮೊಸಳೆ ಪತ್ತೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ- 218 ಸೇತುವೆ ಮೇಲೆ ಕಂಡು ಬಂದಿರುವ ಮೊಸಳೆ ಬಾಯಿಗೆ ಹಗ್ಗದಿಂದ ಕಟ್ಟಲಾಗಿದೆ. ಪರಿಣಾಮ ಆಹಾರ ಸೇವಿಸಲಾಗದ ಮೊಸಳೆ ಕಂಗಾಲಾಗಿ ಹೆದ್ದಾರಿಗೆ ಬಂದಿರುವ ಸಾಧ್ಯತೆಯಿದೆ.
ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆ ಕಂಡುಕೊಂಡಿದ್ದು, ಬೇಸಿಗೆ ಸಂದರ್ಭದಲ್ಲಿ ತಾಪಮಾನ ತಾಳದೇ ನದಿ ತೀರದ ಕಬ್ಬಿನ ಗದ್ದೆಗಳಿಗೆ ಬರುತ್ತವೆ. ಜನವಸತಿ ಪ್ರದೇಶಗಳಿಗೂ ನುಗ್ಗುತ್ತವೆ.
ಇದೇ ರೀತಿ ಮೊಸಳೆ ಜನವಸತಿ ಪ್ರದೇಶ ಅಥವಾ ಕಬ್ಬಿನ ಗದ್ದೆಗಳಲ್ಲಿ ಕಂಡು ಬಂದಾಗ ಬಾಯಿಗೆ ಹಗ್ಗ ಕಟ್ಟಿ ಸೆರೆ ಹಿಡಿಯುವ ಸಂದರ್ಭದಲ್ಲಿ ಮೊಸಳೆ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಮೊಸಳೆ ಕಂಡುಬರುತ್ತಲೇ ಸ್ಥಳಕ್ಕೆ ಧಾವಿಸಿರುವ ಕೊಲ್ಹಾರ ಠಾಣೆ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಬಂದ ಮೇಲೆ ಮೊಸಳೆ ಬಾಯಿಗೆ ಕಟ್ಟಿರುವ ಹಗ್ಗ ಬಿಚ್ಚಿ, ನದಿಗೆ ಬಿಡುವುದಾಗಿ ಪೊಲೀಸರು ತಿಳಿಸಿದ್ದಾರೆ.