ಡೈಲಿ ವಾರ್ತೆ:07 ಮಾರ್ಚ್ 2023
ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ:
ವೀರಶೈವ ಧರ್ಮ ಇದು ವಿಶ್ವಧರ್ಮ. ಮಾನವ ಕಲ್ಯಾಣವನ್ನು ಬಯಸಿದ ಮಾನವ ಧರ್ಮ- ಚನ್ನವೀರಶ್ರೀ
ವೀರಶೈವ ಧರ್ಮ ಇದು ವಿಶ್ವಧರ್ಮ. ಸಮಸ್ತ ಮಾನವ ಕಲ್ಯಾಣವನ್ನು ಬಯಸಿದ ಮಾನವ ಧರ್ಮ. ಈ ವೀರಶೈವ ಧರ್ಮವು ಯುಗ ಯುಗಗಳಲ್ಲಿ ಕಾಣುತ್ತೇವೆ. ವೇದ ಆಗಮ ಉಪನಿಷತ್ ಕಾಲದಷ್ಟೇ ಪುರಾತನವಾದ ಧರ್ಮ ವೀರಶೈವ ಧರ್ಮವಾಗಿದೆ. ಈ ಧರ್ಮವನ್ನು ಯಾರು ಬೇಕಾದವರೂ ಆಚರಿಸಬಹುದು. ಈ ಧರ್ಮಾಚರಣೆಗೆ ಜಾತಿ, ಮತ, ಪಂಥ, ವರ್ಣ ವರ್ಗ ಅಡ್ಡಿಬಾರವು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಪೂಜ್ಯಶ್ರೀ ವೇ. ಚೆನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಹೇಳಿದರು. ಅವರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಘಟಕ ಮತ್ತು ಶ್ರೀ ನಂದೀಶ್ವರ ಅಭಿವೃದ್ದಿ ಸಂಘ ಗದಗ ಜೊತೆಯಾಗಿ ದಿನಾಂಕ: 06 ಮಾರ್ಚ 2023ಸಂಜೆ 6:30ಕ್ಕೆ ಗದುಗಿನ ಕಳಸಾಪುರ ರಸ್ತೆಯಲ್ಲಿ ಇರುವ ನಂದೀಶ್ವರ ನಗರದ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವೀರಶೈವ (ಲಿಂಗಾಯತ) ಧರ್ಮ ಸಂಸ್ಥಾಪಣಾಚಾರ್ಯ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆಯ ನೇತೃತ್ವವಹಿಸಿ ಮಾತನಾಡಿದರು.
ಅವರು ಮುಂದುವರಿದು ಮಾತನಾಡುತ್ತ, ಗುರು ವಿರಕ್ತರೊಂದೆ ಎಂಬ ಸಮತೆ ಸಾರಿದ ಹಾನಗಲ್ ಕುಮಾರೇಶನ ಆದರ್ಶವನ್ನು ಪಾಲಿಸಿಕೊಂಡು ಬಂದ ಡಾ. ಪಂ. ಪುಟ್ಟರಾಜ ಕವಿಗವಾಯಿಗಳವರು, ನಮಗೆಲ್ಲ ಹೇಳಿದ್ದು ಗುರು ವಿರಕ್ತರು ನಮ್ಮ ಸಮಾಜದ ಎರಡು ಕಣ್ಣುಗಳಿದ್ದ ಹಾಗೆ ವೀರಶೈವ ಮತ್ತು ಲಿಂಗಾಯತ ಬೇರೆ ಅಲ್ಲ ಎಂದು ನಮಗೆ ಪಾಠಮಾಡಿದ್ದಾರೆ. ಅವರ ಶಿಷ್ಯರಾದ ನಾವು ಅವರ ಆದರ್ಶ ಪಾಲಿಸಿಕೊಂಡು ಬರುತ್ತಿದ್ದೇವೆ ಮತ್ತು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ ಎನ್ನುವ ಸಂದೇಶವನ್ನು ನಾವು ನಮ್ಮ ಪ್ರವಚನಗಳಲ್ಲಿ ತಿಳಿಸುತ್ತಾ ಬಂದಿದ್ದೇವೆ ಎಂದು ಹೇಳಿದರು. ಬಸವಾದಿ ಪ್ರಮಥರನ್ನು, ಮತ್ತು ವಚನ ಸಾಹಿತ್ಯವನ್ನು ಈ ನಾಡಿಗೆ ನೀಡಿದ್ದು ಈ ವೀರಶೈವ ಧರ್ಮ. ಮಾನವ ಧರ್ಮಕ್ಕೆ ಜಯವಾಗಲಿ ಎಂದವರು ನಮ್ಮ ಆಚಾರ್ಯರು, ವೀರಶೈವ ಧರ್ಮ, ಪೂರೋಹಿತಶಾಹಿಯನ್ನು ವಿರೋಧಿಸಿ ದೇವನನ್ನು ದೇಹದ ಮೇಲೆ ಸ್ಥಾಪಿಸಿಕೊಂಡ ಧರ್ಮ ಎಂದು ಹೇಳಿದರು.
ಈ ವರ್ಷದಿಂದ ಕರ್ನಾಟಕ ಸರಕಾರ, ಸರಕಾರದ ಎಲ್ಲಾ ಕಚೇರಿಗಳಲ್ಲಿ ಜ. ಶ್ರೀ ರೇಣುಕ ಜಯಂತಿ ಆಚರಣೆ ಚಾಲನೆ ನೀಡಿದ್ದು, ಸನಾತನ ಧರ್ಮಕ್ಕೆ ಕರ್ನಾಟಕ ಸರಕಾರ ಸಲ್ಲಿಸಿದ ಗೌರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ಆರಂಭದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜ. ರೇಣುಕಾಚಾರ್ಯರ ಕುರಿತು ವೇ. ಫಕ್ಕೀರಯ್ಯ ಶಾಸ್ತ್ರಿ ಹಿರೇಮಠ ಬೆಳ್ಳಟ್ಟಿ ಉಪನ್ಯಾಸ ನೀಡಿದರು. ೮೫ ವರ್ಷಗಳಿಂದ ಗದಗ ನಗರದಲ್ಲಿ ಪಂಚಾಚಾರ್ಯ ಸೇವೆ ಮಾಡಿಕೊಂಡು ಬಂದ ಜ. ಪಂಚಾಚಾರ್ಯ ಸೇವಾ ಸಂಘದ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಮತ್ತು ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸಂಗಮ್ಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು ಆರಂಭದಲ್ಲಿ ವೀರಯ್ಯ ಹೊಸಮಠ ಇವರು ಪ್ರಾರ್ಥನೆ ಸಲ್ಲಿಸಿದರು. ಸಿದ್ಧಲಿಂಗಪ್ಪ ಚಳಗೇರಿ ಸರ್ವರಿಗೂ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆ ವಿ. ಎಸ್. ದಲಾಲಿ ಉಪನ್ಯಾಸಕರು ಕೆ.ವಿ.ಎಸ್. ಆರ್. ಕಾಲೇಜ ಇವರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ವಿ. ಕೆ. ಗುರುಮಠ, ವಿ. ಎಸ್. ಕಡಗದ ಎಸ್. ಬಿ. ಶಿವಳ್ಳಿ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಜಿಲ್ಲಾ ಅಧ್ಯಕ್ಷ ಮಂಜುನಾಥ ಹಳ್ಳೂರಮಠ ಬೆಳಧಡಿ, ಸಮಾಜದ ಮುಖಂಡರಾದ ವೀರಣ್ಣ ಧನ್ನೂರ ಹಿರೇಮಠ, ಇದ್ದರು. ಉಮೇಶ ಭೂಸನೂರ ಮಠ ಕಾರ್ಯಕ್ರಮ ನಿರೂಪಿಸಿದರು ನಾಗರಾಜ ಜಗ್ಗಲ ವಂದನಾರ್ಪಣೆ ಮಾಡಿದರು.