ಡೈಲಿ ವಾರ್ತೆ:10 ಮಾರ್ಚ್ 2023
ಅಚ್ಲಾಡಿ: ವನದೇವತೆ ಶ್ರೀಯಕ್ಷೇಶ್ವರೀ ದೇಗುಲ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ
ಕೋಟ: ಅಚ್ಲಾಡಿ ಗಾಣಿಗರಬೆಟ್ಟು-ಕೊಲಗೇರಿಯಲ್ಲಿರುವ ಶ್ರೀಯಕ್ಷೇಶ್ವರೀ ಸಪರಿವಾರ ವನದೇವತೆ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಈ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮ ಮಾ.10ರಂದು ಜರಗಿತು.
ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಹೊಸ-ಹೊಸ ದೇವಸ್ಥಾನಗಳನ್ನು ನಿರ್ಮಿಸುವುದಕ್ಕಿಂತ ಹಳೆಯ ದೇಗುಲಗಳನ್ನು ಪುನರ್ ನಿರ್ಮಿಸುವುದು ಅತ್ಯಂತ ಪುಣ್ಯದ ಕೆಲಸವಾಗಿದೆ. ಅದೇ ರೀತಿ ಈ ದೇಗುಲದ ಜೀರ್ಣೋದ್ಧಾರದಿಂದ ಊರಿಗೆ ಒಳಿತಾಗಲಿದೆ ಎಂದರು.
ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಜೀರ್ಣೋದ್ಧಾರದ ಯೋಜನೆಯ ಮಾಹಿತಿ ನೀಡಿ, ಈ ಕ್ಷೇತ್ರವು ಅತ್ಯಂತ ಪುರಾತನವಾಗಿದ್ದು ವನದೇವತೆಯಾಗಿ ಯಕ್ಷೇಶ್ವರೀ ನೆಲೆಸಿದ ಸನ್ನಿಧಿಯಾಗಿದೆ. ದಶಕಗಳ ಹಿಂದೆ ಗುಡಿಯಲ್ಲಿ ದೇವಿಯನ್ನು ಪ್ರತಿಷ್ಢಾಪಿಸಲಾಗಿತ್ತು. ಆದರೆ ಇದೀಗ ಮೂಲದಂತೆ ವನ ದೇವತೆಯಾಗಿ ಯಕ್ಷೇಶ್ವರೀಯನ್ನು ಪ್ರತಿಷ್ಠಾಪಿಸಬೇಕು ಹಾಗೂ ಕ್ಷೇತ್ರವು ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಔದ್ಯೋಗಿಕ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಕಾರಣೀಕ ಸ್ಥಳವಾಗಿದೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಎಲ್ಲಾ ಕಷ್ಟಗಳು ಶಮನವಾಗುತ್ತದೆ ಎಂದು ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ಅದೇ ರೀತಿ ಕ್ಷೇತ್ರವನ್ನು ನೈಸರ್ಗಿಕವಾಗಿ ನಿರ್ಮಿಸಲು ಯೋಜಿಸಿದ್ದು, ಭಜನಾ ಮಂಟಪ, ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳನ್ನು ಮೊವ್ವತ್ತು ಲಕ್ಷ ಅಂದಾಜು ವೆಚ್ಚದಲ್ಲಿ ಹಾಕಿಕೊಳ್ಳಲಾಗಿದೆ ಎಂದರು.
ಬೆಂಗಳೂರಿನ ಕ್ಯಾಟರಿಂಗ್ ಉದ್ಯಮಿ ಪ್ರಕಾಶ್ ಶೆಟ್ಟಿ ಉಳ್ಳೂರು, ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಜೀರ್ಣೋದ್ಧಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ವಡ್ಡರ್ಸೆ ಗ್ರಾ.ಪಂ. ಸದಸ್ಯ ಚಂದ್ರಶೇಖರ್ ಶೆಟ್ಟಿ ಅಚ್ಲಾಡಿ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸವಿತಾ ಪ್ರಕಾಶ್ ಆಚಾರ್ಯ, ದೇಗುಲದ ಅರ್ಚಕರಾದ ಗಣೇಶ್ ಭಟ್ ಅಚ್ಲಾಡಿ ಹಾಗೂ ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಸದಸ್ಯ ಸುಶಾಂತ್ ಶೆಟ್ಟಿ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.