ಡೈಲಿ ವಾರ್ತೆ:12 ಮಾರ್ಚ್ 2023
ಉಡುಪಿ ಜಿಲ್ಲೆಯಿಂದ ಉಮ್ರಾಕ್ಕೆ ಹೋದ ಕೋಟದ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತ್ಯು!
ಕೋಟ: ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾ – ಮದೀನಾಕ್ಕೆ ಉಮ್ರಾ ನೆರವೇರಿಸಲು ಹೋಗಿದ್ದ ರಾಜ್ಯದ ಉಡುಪಿ ಜಿಲ್ಲೆಯ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಮಾ. 9 ಹಾಗೂ 11 ರಂದು ಸೌದಿಅರೇಬಿಯಾದ ಮಕ್ಕಾದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:
ಅಲ್ ಸದೀಮ್ ಟೂರ್ಸ್ & ಟ್ರಾವೆಲ್ಸ್ ಮಂಗಳೂರು ಇವರ ಏಜೆನ್ಸಿಯಿಂದ 23 ಮಹಿಳೆಯರು ಹಾಗೂ 11 ಪುರುಷರು ಒಟ್ಟು 34 ಮಂದಿಯ ತಂಡವು ಮಾರ್ಚ್ 1ರಂದು ಮಂಗಳೂರಿನಿಂದ ಉಮ್ರಾ ನೆರವೇರಿಸಲು ಮಕ್ಕಾ ಕ್ಕೆ ಹೊರಟಿತ್ತು.
ಅದರಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಮಧುವನ ಅಚ್ಲಾಡಿಯ 4 ಜನ ಮಹಿಳೆಯರು ಇದ್ದರು.
ಇವರು ಉಮ್ರಾ ಕಾರ್ಯ ಮುಗಿಸಿಕೊಂಡು ಮದೀನಾಕ್ಕೆ ಹೋಗುವ ತಯಾರಿಯಲ್ಲಿ ಇದ್ದಿದ್ದು. ಈ ಸಂದರ್ಭ ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯ ಮರಿಯಮ್ಮ (66) ಮಾ. 9 ರಂದು ಗುರುವಾರ ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರೆ,
2 ದಿನದ ನಂತರ ಜೊತೆಗೆ ಇದ್ದ ಮಹಿಳೆ ಮಧುವನ ಅಚ್ಲಾಡಿಯ ಖತಿಜಮ್ಮ (68) ಮಾರ್ಚ್ 11 ರಂದು ಶನಿವಾರ ಭಾರತದ ಕಾಲಮಾನ ಸಂಜೆ 3 ಗಂಟೆಗೆ ಅನಾರೋಗ್ಯದಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ.
ಇಬ್ಬರು ಸಂಬಂಧಿಗಳಾಗಿದ್ದರು.
ಇಬ್ಬರ ಮೃತದೇಹವನ್ನು ಮಕ್ಕಾದಲ್ಲಿ ದಪನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈರ್ವರು ಮೃತರು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ಅಗಲಿಕೆಗೆ ಜಮಾತ್ ಬಾಂದವರು ಹಾಗೂ ಊರ ಮಹನೀಯರು ಸಂತಾಪ ಸೂಚಿಸಿದ್ದಾರೆ.