ಡೈಲಿ ವಾರ್ತೆ:15 ಮಾರ್ಚ್ 2023

ವಿಟ್ಲ’ಪ್ರಜಾದ್ವನಿ’ ಕಾಂಗ್ರೆಸ್ ಕಾರ್ಯಕ್ರಮ: ಬಿಜೆಪಿ ಭಾವನಾತ್ಮಕತೆಯನ್ನು ಕೆರಳಿಸುವ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ – ಬಿ.ಕೆ. ಹರಿಪ್ರಸಾದ್

ಬಂಟ್ವಾಳ : ಕಾಂಗ್ರೆಸ್ ದೇಶದ ಜನರ ಬದುಕಿನ ಪ್ರಗತಿಯ ಬಗ್ಗೆ ಚಿಂತನೆ ಮಾಡಿದರೆ, ಬಿಜೆಪಿ ಭಾವನಾತ್ಮಕತೆಯನ್ನು ಕೆರಳಿಸುವ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಭ್ರಷ್ಟಾಚಾರವೆಸಗಿ ಅದನ್ನೇ ವೈಭವೀಕರಣ ಮಾಡುತ್ತಿರುವ ಬಿಜೆಪಿಯವರು ಬೇರೆಯವರಿಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಶೇ.30ರಷ್ಟು ಕೆಲಸದಲ್ಲಿ ಶೇ.40ರಷ್ಟು ಕಮಿಷನ್ ಪಡೆದದ್ದೇ ಪುತ್ತೂರು ಸ್ಮಾರ್ಟ್ ಸಿಟಿಯ ಸಾಧನೆಯಾಗಿದೆ. ಹಿಂದುತ್ವದಲ್ಲಿ ಮಹಿಳೆಯರ ಸ್ಥಾನಮಾನ ಏನೆಂಬುದನ್ನು ತಿಳಿಸುವ ಕಾರ್ಯವಾಗಬೇಕು. ಬಿಜೆಪಿಯವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ. “ನಾ ಖಾವೂಂಗಾ, ನಾ ಖಾನೆ ದೂಂಗಾ” ಎನ್ನುವವರು ತಿಮಿಂಗಿಲವನ್ನೇ ನುಂಗುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿದರು.ಅವರು ಬುಧವಾರ ವಿಟ್ಲದ ಸ್ಟೈಲ್ ಪಾರ್ಕ್ ಮೈದಾನದಲ್ಲಿ ವಿಟ್ಲ – ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಧಾನ ಪರಿಷತ್ತು ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿಯಲ್ಲಿ ಐಟಿ ಹಾಗೂ ಗಾರ್ಮೆಂಟ್ ಇಂಡಸ್ಟ್ರೀ ಪಾರ್ಕ್ ಸ್ಥಾಪನೆಯ ಮೂಲಕ 1 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಹಾಕಲಾಗಿದೆ. ಕರಾವಳಿಯ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಯೋಜನೆ ಹಾಕಲಾಗಿದೆ. ಭಾವನಾತ್ಮಕತೆಗೆ ಮತ ಹೋಗದೆ, ನೈಜತೆಯನ್ನು ಜನರಿಗೆ ತಿಳಿಸುವ ಕಾರ್ಯ ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆ.ಪಿ.ಸಿ.ಸಿ. ಸದಸ್ಯರಾದ ದಿನೇಶ್ ಅಡ್ಪಂಗಾಯ, ಕೃಪಾ ಅಮರ್ ಆಳ್ವ, ಪ್ರಮುಖರಾದ ಸತೀಶ್ ಕೆಡೆಂಜ, ದಿವ್ಯ ಪ್ರಭಾ ಚಿಲ್ತಡ್ಕ, ಪ್ರಹ್ಲಾದ ಬೆಳ್ಳಿಪ್ಪಾಡಿ, ಜಿಲ್ಲಾ ಸೇವಾ ದಳದ ಅಧ್ಯಕ್ಷ ಜೋಕಿಮ್ ಸಿಕ್ವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾವು ಹೇಮನಾಥ ಶೆಟ್ಟಿ, ಎಂ.ಎಸ್.ಮುಹಮ್ಮದ್, ಚಂದ್ರಹಾಸ ಶೆಟ್ಟಿ, ಅಶೋಕ್ ಕುಮಾರ್ ರೈ,

ವಿಟ್ಲ ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ. ಬಿ. ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.