ಡೈಲಿ ವಾರ್ತೆ:16 ಮಾರ್ಚ್ 2023
ಮಣಿಪಾಲ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕಳ್ಳತನ ಇಬ್ಬರು ಆರೋಪಿ ಕಳ್ಳಿಯರ ಬಂಧನ
ಉಡುಪಿ: ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆಯ ನಡೆಸಿದ ಪೊಲೀಸರು ಕೇವಲ 8 ಗಂಟೆಯೊಳಗೆ ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತ ನಗರದ ಲಲಿತಾ ಬೋವಿ(41) ಹಾಗೂ ಸುಶೀಲಮ್ಮ ಬೋವಿ(64) ಎಂದು ಗುರುತಿಸಲಾಗಿದೆ. ಬಂಧಿತರಿಂದ 4,03,000ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಪು ಕುತ್ಯಾರು ಕೇಂಜಾ ನಿವಾಸಿ ವಸಂತ್ ಕುಮಾರ್ ಹೆಗ್ಡೆ ಎಂಬವರ ಪತ್ನಿ ಪುನೀತ್ ವಸಂತ್ ಹೆಗ್ಡೆ(69) ಎಂಬವರು ತಮ್ಮ ಕುಟುಂಬದೊಂದಿಗೆ ಮುಂಬೈಗೆ ಹೋಗಲು ಮಂಗಳೂರು–ಮುಂಬಯಿ ಎಕ್ಸ್‌ಪ್ರೆಸ್ ರೈಲಿಗೆ ಮಾ.14ರಂದು ಮಧ್ಯಾಹ್ನ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಹತ್ತಿದ್ದು, ಈ ವೇಳೆ ಅವರ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಜಿಪ್ ತೆರೆದು ಚಿನ್ನಾಭರಣ ಹಾಗೂ ವ್ಯಾಚ್ನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತರಾದ ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಎಸ್ಸೈ ನವೀನ್ ನಾಯ್ಕ, ಎಎಸ್ಸೈ ಶೈಲೇಶ್, ಸಿಬ್ಬಂದಿ ಇಮ್ರಾನ್, ಶುಭ, ಅರುಣಾ ಚಾಳೇಕರ್ ತಂಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಕಳೆ ಹಾಕಿತು. ಅದರ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿ ಮಾ.15ರಂದು ಬೆಳಗ್ಗೆ 6:30 ಗಂಟೆಗೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.