ಡೈಲಿ ವಾರ್ತೆ:18 ಮಾರ್ಚ್ 2023

ದಕ್ಷಿಣ ಕನ್ನಡ ಮುಂದುವರಿದ ಪೌರ ಕಾರ್ಮಿಕರ ಮುಷ್ಕರ: ಕಸದ ರಾಶಿಯಿಂದ ಗಬ್ಬು ನಾರುತ್ತಿರುವ ಮಂಗಳೂರು ನಗರ

ಮಂಗಳೂರು: ಪೌರ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕಿಳಿದಿರುವುದರಿಂದ ಮಂಗಳೂರು ನಗರ ಗಬ್ಬು ನಾರಲು ಆರಂಭಿಸಿದೆ. ಮುಷ್ಕರ ಆರಂಭಿಸಿ ಐದು ದಿನಗಳಾಗಿದ್ದು, ಮಂಗಳೂರು ನಗರದ ಸ್ಟೇಟ್ ಬ್ಯಾಂಕ್, ಬಂದರು, ಮಾರ್ಕೆಟ್, ಉರ್ವ, ಲಾಲ್ ಬಾಗ್, ಪಂಪ್ ವೆಲ್, ಕಂಕನಾಡಿ ಸೇರಿದಂತೆ ನಗರದೆಲ್ಲೆಡೆ ಕಸದ ರಾಶಿ ಬೆಟ್ಟದೆತ್ತರಕ್ಕೆ ತಲುಪಿದೆ. ಅಂಗಡಿ ಮುಂಗಟ್ಟುಗಳ ಎದುರು ತ್ಯಾಜ್ಯದ ರಾಶಿ ಕಂಡುಬರುತ್ತಿದ್ದು, ನಗರದ ಜನತೆ ಪಾಲಿಕೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅಪಾರ್ಟ್ ಮೆಂಟ್, ಹೋಟೆಲ್, ಮನೆಗಳ ಮುಂದೆ ಹಾಕಿದ್ದ ಕಸ ತೆಗೆಯದ ಹಿನ್ನೆಲೆಯಲ್ಲಿ ನಿವಾಸಿಗಳು ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಂಗಳೂರು ಮಹಾನಗರ ಪಾಲಿಕೆಯು ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈವೇಟ್ ಲಿಮಿಟೆಡ್ (ಎಡಬ್ಲ್ಯುಎಚ್’ಸಿಪಿಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡು ಮಂಗಳೂರಿನಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಿಸುವ ಪರ್ಯಾಯ ವ್ಯವಸ್ಥೆ ಮಾಡಿದೆ. ಆದರೂ ಎಲ್ಲಾ 60 ವಾರ್ಡ್’ಗಳಿಗೂ ಹೋಗಿ ತ್ಯಾಜ್ಯ ಸಂಗ್ರಹ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಇದರಿಂದ ಕೆಲವು ವಾರ್ಡ್ ಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ.
ನಗರದಲ್ಲಿನ ಕಸದ ರಾಶಿಯನ್ನು ತೆರವುಗೊಳಿಸಲು ಪಾಲಿಕೆಯು ಪ್ರಯತ್ನ ಮಾಡುತ್ತಿದೆ ಎಂದು ಮೇಯರ್ ಹೇಳಿಕೆ ನೀಡಿದ್ದರೂ, ನಗರಾದ್ಯಂತ ಕಸದ ಸಮಸ್ಯೆ ಮಿತಿ ಮೀರಿದ್ದು, ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮುಂದುವರಿದರೆ ನಗರದ ಖ್ಯಾತಿಗೆ ಧಕ್ಕೆ ಬರಲಿದೆ ಎಂದು ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.