ಡೈಲಿ ವಾರ್ತೆ:19 ಮಾರ್ಚ್ 2023

ಫ್ರೆಂಡ್ಸ್ ಕ್ರಿಕೆಟರ್ಸ್ ಹೊನ್ನಾಳ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘ ಹೊನ್ನಾಳದವರ ವತಿಯಿಂದ ಆಕಸ್ಮಿಕವಾಗಿ ಕಾಲು ಕಳೆದುಕೊಂಡ ಸ್ನೇಹಿತನಿಗೆ ಸಹಾಯಹಸ್ತ

ಹೊನ್ನಾಳ: ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಕ್ರೀಡೆಯಾಗಿ ಉಳಿಯದೆ ಅದು ವಿಶ್ವದ ಎಲ್ಲಾ ಜಾತಿ ಮತ ಪಂಥದ ಜನರನ್ನು ಒಟ್ಟಾಗಿ ಬೆಸೆಯುವ ಕೊಂಡಿಯಾಗಿ ಮಾರ್ಪಟ್ಟಿದೆ. ಸಮಾಜದಲ್ಲಿ ಕೆಲವರು ಕ್ರಿಕೆಟ್ ಆಟದಲ್ಲಿ ಹಣ ಸಂಪಾದನೆ ಮಾಡುವ ದಾರಿಯನ್ನು ಕಂಡುಕೊಂಡರೆ ಅದಕ್ಕೆ ಅಪವಾದವೆನ್ನುವಂತೆ ಹೊನ್ನಾಳ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಹೊನ್ನಾಳವು ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿ ಅದರಲ್ಲಿ ಉಳಿದಂತಹ ಸುಮಾರು ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಯನ್ನು ಆಕಸ್ಮಿಕವಾಗಿ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡ ತಮ್ಮ ಸಹ ಆಟಗಾರನಾದ ನಿಹಾದ್ ರವರಿಗೆ ನೀಡುವುದರ ಮೂಲಕ ತಮ್ಮ ಸಮಾಜಮುಖಿ ಕೆಲಸಗಳಲ್ಲಿ ಮತ್ತೊಂದು ಗರಿಯನ್ನು ಹೆಚ್ಚಿಸಿಕೊಂಡಿದ್ದಾರೆ.

ಸುಮಾರು ಒಂದು ತಿಂಗಳಿಂದ ಹಗಲಿರುಳೆನ್ನದೆ ಪರಿಶ್ರಮಪಟ್ಟು ತಾರೀಕು 5/03/2023 ರ ಆದಿತ್ಯವಾರ ಹೊನ್ನಾಳ ಪರಿಸರದ ಸುಮಾರು 8 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿ ಕ್ರೀಡಾ ಪ್ರೋತ್ಸಾಹಕರಿಂದ ಸಂಗ್ರಹಿಸಿದ ಹಣವನ್ನು ತಮ್ಮ ಸ್ವಂತಕ್ಕೆ ಬಳಸದೆ ತಮ್ಮ ಸಹೋದರನ ಕ್ರತಕ ಕಾಲು ಜೋಡನೆಗೆ ನೀಡುವುದರ ಮುಖಾಂತರ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ರಿಕೆಟ್ ತಂಡದ ಎಲ್ಲಾ ಆಟಗಾರರು ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು ಸಮಾಜಸೇವಕರು ಉಪಸ್ಥಿತರಿದ್ದರು.

ನಿಹಾದ್ ರವರಿಗೆ ಕ್ರತಕ ಕಾಲು ಜೋಡಣೆ ಮಾಡಲು ಸುಮಾರು ಐದು ಲಕ್ಷ ರೂಪಾಯಿಯ ಅವಶ್ಯಕತೆ ಇದ್ದು ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಘದ ಸದಸ್ಯರು ತಿಳಿಸಿದ್ದಾರೆ.