ಡೈಲಿ ವಾರ್ತೆ:21 ಮಾರ್ಚ್ 2023
ರಾಬ್ರಿ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ
ಬೀದರ್: ಕಳ್ಳತನ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿಗೆ ಯತ್ನಿಸಿದ ಘಟನೆ ನಗರದ ಚಿದ್ರಿ – ಮೈಲೂರು ರಿಂಗ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಈ ವೇಳೆ ಸಿಪಿಐ ತಮ್ಮ ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಗರದ ಇರಾನಿ ಗಲ್ಲಿಯ 25 ವರ್ಷದ ಯುವಕ ಬಂಧಿತ ಆರೋಪಿಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ನಗರದ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ಮಲ್ಲಿಕಾರ್ಜುನ ಯಾತನೂರ್ ಮತ್ತು ಸಿಪಿಐ ನಾಗೇಂದ್ರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದರು. ಕಾರ್ಯಾಚರಣೆ ವೇಳೆ ಅನುಮಾನಸ್ಪವಾಗಿ ಎರಡು ಬೈಕ್ ಗಳ ಮೇಲೆ ಬರುತ್ತಿದ್ದ ಯುವಕರನ್ನು ಪೊಲೀಸರು ತಡೆಯಲು ಮುಂದಾದಾಗ ಪೊಲೀಸರ ಮೇಲೆ ಬೈಕ್ ಗಳನ್ನು ಹರಿಸಲು ಯತ್ನಿಸಿದ್ದಲ್ಲದೇ ಚಾಕು ತೋರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಪೊಲೀಸರು ಜಾಲ ಬೀಸಿದ್ದಾರೆ.
ಘಟನೆ ಕುರಿತಂತೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ, ರಾಬ್ರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಪೊಲೀಸರಿಗೆ ಚಾಕು ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅತ್ಮರಕ್ಷಣೆಗಾಗಿ ಸಿಪಿಐ ಮಲ್ಲಿಕಾರ್ಜುನ ಯಾತನೂರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ಚಾಕು ಮತ್ತು ಬೈಕ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತನ ವಿರುದ್ಧ 5 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಘಟನೆ ಕುರಿತಂತೆ ಗಾಂಧಿ ಗಂಜ್ ಠಾಣೆಯಲ್ಲಿಪ್ರಕರಣ ದಾಖಲು ಮಾಡಿಲೊಳ್ಳಲಾಗಿದೆ ಎಂದು ತಿಳಿಸಿದರು.