ಡೈಲಿ ವಾರ್ತೆ:27 ಮಾರ್ಚ್ 2023

ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ವಿರೋಧಿಸಿ ಪ್ರತಿಭಟನೆ: ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ.!

ಶಿವಮೊಗ್ಗ: ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ವಿರೋಧಿಸಿ ಶಿಕಾರಿಪುರದಲ್ಲಿ ತಾಲೂಕು ಬಂಜಾರ ಸಮಾಜ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಶಿವಮೊಗ್ಗದ ಶಿಕಾರಿಪುರದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ತಾರಕಕ್ಕೇರಿದೆ. ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಾಜಿ ಸಿಎಂ ಬಿಎಸೈ ನಿವಾಸದ ಕಿಟಕಿ ಗಾಜುಗಳಿಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಬ್ಯಾರಿಕೇಡ್ ತಳ್ಳಿ, ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲುಗಳನ್ನು ತೂರಿದ್ದಾರೆ.
ಪೊಲೀಸರ ಸೂಚನೆ ಧಿಕ್ಕರಿಸಿ, ಏಕಾಏಕಿ ಕಲ್ಲುತೂರಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತಗೊಂಡ ಪ್ರತಿಭಟನಾಕಾರರ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಕಲ್ಲುತೂರಾಟದಿಂದ ಕೆಲ ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಭೇಟಿ ನೀಡಿ ಸಿಬ್ಬಂದಿಗಳ ರವಾನಿಸುವ ಕೆಲಸ ಮಾಡಿದ್ದಾರೆ. ಶಿಕಾರಿಪುರ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿರುವ ಯಡಿಯೂರಪ್ಪ ಅವರ “ಮೈತ್ರಿ’ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.