ಡೈಲಿ ವಾರ್ತೆ:28 ಮಾರ್ಚ್ 2023

ಸೌದಿ ಅರೇಬಿಯಾದಲ್ಲಿ ಬಸ್ ಭೀಕರ ಅಪಘಾತ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು

ಜಿದ್ದಾ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 20 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಪ್ರಯಾಣಿಕ ಬಸ್ ಸೇತುವೆಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 20 ಮಂದಿ ಸಾವನ್ನಪ್ಪಿ 29 ಮಂದಿ ಗಾಯಗೊಂಡಿದ್ದಾರೆ.

ಬ್ರೇಕ್ ವೈಫಲ್ಯದ ಪರಿಣಾಮವಾಗಿ ಅಪಘಾತವು ಸಂಭವಿಸಿದೆ. ಅಸಿರ್ ಪ್ರಾಂತ್ಯ ಮತ್ತು ಅಭಾ ನಗರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಂಭವಿಸಿದೆ. ಉಮ್ರಾ ನಿರ್ವಹಿಸಲು ಮಕ್ಕಾಗೆ ತೆರಳುತ್ತಿದ್ದಾಗ ಈ ದುಘಟನೆ ನಡೆದಿದೆ.

ಸೌದಿ ನಾಗರಿಕ ರಕ್ಷಣಾ ಮತ್ತು ರೆಡ್ ಕ್ರೆಸೆಂಟ್ ಪ್ರಾಧಿಕಾರದ ತಂಡಗಳು ಅಪಘಾತದ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದೆ.