ಡೈಲಿ ವಾರ್ತೆ:28 ಮಾರ್ಚ್ 2023
ಅಮೆರಿಕದ ಶಾಲೆಯ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ, ಮೂವರು ವಿದ್ಯಾರ್ಥಿಗಳು ಸೇರಿ 6 ಮಂದಿ ಸಾವು
ಅಮೆರಿಕದ ನ್ಯಾಶ್ವಿಲ್ಲೆ ನಗರದ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ದುಷ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ 3 ವಿದ್ಯಾರ್ಥಿಗಳು ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.
AFP ಸುದ್ದಿ ಸಂಸ್ಥೆಯ ಪ್ರಕಾರ, ದಾಳಿಕೋರ ಮಹಿಳೆಯಾಗಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ದ ಬಳಿಕ ಮೃತರ ಸಾವು ದೃಢಪಟ್ಟಿದೆ. ಕಾನ್ವೆಂಟ್ ಶಾಲೆಯಲ್ಲಿ ಈ ದಾಳಿ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವಾಸ್ತವವಾಗಿ, ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣದ ಚಿಕಿತ್ಸೆಗಾಗಿ ಮನ್ರೋ ಕ್ಯಾರೆಲ್ ಜೂನಿಯರ್ ಮಕ್ಕಳ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ದಾಳಿಯಲ್ಲಿ ಇನ್ನೆಷ್ಟು ಸಾವು ನೋವುಗಳು ಸಂಭವಿಸಿವೆಯೋ ಇಲ್ಲವೋ ಎಂಬುದು ದೃಢಪಟ್ಟಿಲ್ಲ.
ಈ ಘಟನೆಯ ನಂತರ, ಶಾಲೆಯಲ್ಲಿದ್ದ ಇತರ ವಿದ್ಯಾರ್ಥಿಗಳನ್ನು ಪೊಲೀಸ್ ರಕ್ಷಣೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು. ಭಯಭೀತರಾದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಚರ್ಚ್‌ಗೆ ಕರೆತರಲಾಯಿತು. ಶಾಲೆಯ ವೆಬ್‌ಸೈಟ್‌ನ ಪ್ರಕಾರ, 2001 ರಲ್ಲಿ ಸ್ಥಾಪಿಸಲಾದ ಶಾಲೆಯು ಸರಿಸುಮಾರು 200 ವಿದ್ಯಾರ್ಥಿಗಳನ್ನು ಹೊಂದಿದೆ. ಅಲ್ಲದೆ ಶಾಲೆಯಲ್ಲಿ 33 ಶಿಕ್ಷಕರಿದ್ದಾರೆ.
ಈ ಹಿಂದೆಯೂ ಇಂತಹ ದಾಳಿಗಳು ಅಮೆರಿಕದಲ್ಲಿ ನಡೆದಿವೆ. ಜನವರಿಯಲ್ಲಿ ಅಮೆರಿಕದ ಅಯೋವಾದಲ್ಲಿ ಶಾಲೆಯೊಂದರಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆದಿತ್ತು. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಓರ್ವ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ಎರಡು ದಿನಗಳ ಮೊದಲು, ಕ್ಯಾಲಿಫೋರ್ನಿಯಾದಲ್ಲಿ ಅಪ್ರಚೋದಿತ ಗುಂಡಿನ ಘಟನೆಯಲ್ಲಿ 10 ಜನರು ಸಾವನ್ನಪ್ಪಿದ್ದರು. ಇದಲ್ಲದೇ ಹಲವರು ಗಾಯಗೊಂಡಿದ್ದರು.