ಡೈಲಿ ವಾರ್ತೆ:02 ಏಪ್ರಿಲ್ 2023
ಬಿ.ಸಿ.ರೋಡ್ : ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಬೃಹತ್ ಮಾತೃಶಕ್ತಿ ಸಮಾವೇಶ
ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಇದರ ಆಶ್ರಯದಲ್ಲಿ ಬೃಹತ್ ಮಾತೃಶಕ್ತಿ ಸಮಾವೇಶ ಸಮಾವೇಶ ಬಿ.ಸಿ.ರೋಡ್ – ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳ ಜೊತೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಮಹಿಳೆಯರು ಕೂಡಾ ದೇಶದ ಆಡಳಿತ ಚುಕ್ಕಾಣಿ ಹಿಡಿದು ಮುನ್ನಡೆಸಬಲ್ಲರು ಎಂಬುದನ್ನು ನಿರೂಪಿಸಿದ್ದರೆ ಅದು ಉಕ್ಕಿನ ಮಹಿಳೆ, ಧೀಮಂತ ನಾಯಕಿ ಶ್ರೀಮತಿ ಇಂದಿರಾಜಿಯವರು ಎಂದರು.
ದೇಶ ಹಾಗೂ ರಾಜ್ಯದ ಆಡಳಿತಾರೂಢ ಬಿಜೆಪಿಯ ಡಬ್ಬಲ್ ಇಂಜಿನ್ ಸರಕಾರ ಕೇವಲ ಸುಳ್ಳುಗಳ ಗೋಪುರ ಕಟ್ಟಿ ರಾಜಕೀಯ ಮಾಡಿದ್ದು ಬಿಟ್ಟರೆ ಬೇರೇನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಕಾರ್ಯಗತಗೊಳಿಸಲು ಬದ್ದವಾಗಿದೆ ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಮಾತನಾಡಿ ದೇಶದಲ್ಲಿ ಮಹಿಳೆಯರನ್ನು ಗೌರವಿಸುವ, ಅವರಿಗೆ ರಕ್ಷಣೆ, ಸ್ವಾಭಿಮಾನದ ಬದುಕನ್ನು ಕಲ್ಪಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಹಾಗಂತ ತನ್ನ ಕಾರ್ಯವೈಖರಿಯ ಮೂಲಕ ತೋರಿಸಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಮೂಲಕ ಮಾತೃಶಕ್ತಿಯ ಸಾಮರ್ಥ್ಯ ವನ್ನು ತೋರಿಸಬೇಕಾಗಿದೆ ಎಂದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ದ.ಕ.ಜಿಲ್ಲಾ ಉಸ್ತುವಾರಿ ಶಿಭಾ ರಾಮಚಂದ್ರನ್ ಮಾತನಾಡಿ ಭವ್ಯ ಭಾರತದ ಸಂವಿಧಾನದ ತತ್ವಗಳ ಜೊತೆಗೆ ಶಾಂತಿ, ಸೌಹಾರ್ದತೆ , ಸಹಬಾಳ್ವೆಯ ಉಳಿವಿಗಾಗಿ ಕಟಿಬದ್ಧವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸರಳ, ಸಜ್ಜನಿಕೆಯ ಬಿ.ರಮಾನಾಥ ರೈ ಅವರನ್ನು ಬಹುಮತದಿಂದ ಆರಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಕೆ.ಪಿ.ಸಿ.ಸಿ. ಉಪಾಧ್ಯಕ್ಷ, ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಬಿ. ರಮಾನಾಥ ರೈ ಮಾತನಾಡಿ ರಾಜೀವ ಗಾಂದಿ ಅವರ ಕಲ್ಪನೆಯಂತೆ ಅನುದಾನ ಕೇಂದ್ರದಿಂದ ನೇರವಾಗಿ ಜಿಲ್ಲೆಗೆ ತಲುಪಿ ಅಭಿವೃದ್ಧಿ ಸಾಧ್ಯವಾಗಿದ್ದು, ನೇರ ನಗದು ವರ್ಗಾವಣೆಯ ವ್ಯವಸ್ಥೆಯೂ ಯುಪಿಎ ಸರಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸೃಷ್ಟಿಸಿ ಮಕ್ಕಳು, ಮಹಿಳೆಯರ ಆರೋಗ್ಯದ ಬದಲಾವಣೆಗೆ ಇಂದಿರಾ ಗಾಂಧಿ ಕಾರಣರಾಗಿದ್ದರು ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಶಾಲೆಟ್ ಪಿಂಟೊ, ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಕಾಂಗ್ರೆಸ್ ಉಸ್ತುವಾರಿ ಅಪ್ಪಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆಸ್ ಪ್ರಮುಖರಾದ ಮಲ್ಲಿಕಾ ಪಕ್ಕಳ, ಐಡಾ ಸುರೇಶ್, ಮಲ್ಲಿಕಾ ವಿ.ಶೆಟ್ಟಿ, ಜೋಸ್ಮಿನ್ ಡಿ.ಸೋಜ, ನಸೀಮಾ ಬೇಗಂ, ಶಶಿಕಲಾ, ಫೌಝಿಯಾ, ಧನಲಕ್ಷ್ಮೀ ಬಂಗೇರ, ಶೋಭಾ ರೈ, ಜೆಸಿಂತಾ, ಆಯಿಶಾ ಕಲ್ಲಡ್ಕ, ಪ್ಲೋಸಿ ಡಿ.ಸೋಜಾ, ಮಂಜುಳಾ ಕುಶಲ ಎಂ. ಪೆರಾಜೆ, ಕಾಂಚಲಾಕ್ಷಿ ಮೊದಲಾದವರು ಭಾಗವಹಿಸಿದ್ದರು
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಪದವಿಶ್ರೀ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಸಭಾವೇದಿಕೆ ತನಕ ಮೆರವಣಿಗೆ ನಡೆಯಿತು.
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಸ್ವಾಗತಿಸಿದರು.
ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.