

ಡೈಲಿ ವಾರ್ತೆ: ಫೆ./12/2026
ಹುಬ್ಬಳ್ಳಿ ಕಿಮ್ಸ್‌ಗೆ ಅಂಟಿದ ‘ಲಂಚ’ದ ಕಪ್ಪುಚುಕ್ಕೆ: ಹೆಣ ಪ್ಯಾಕ್ ಮಾಡಲು ಚೌಕಾಶಿ ನಡೆಸಿದ ಪಾಪಿಗಳು ಸಸ್ಪೆಂಡ್!

ಹುಬ್ಬಳ್ಳಿ: ವೈದ್ಯಕೀಯ ಕಾಶಿಯೆಂದೇ ಹೆಸರಾದ ಇಲ್ಲಿನ ಕಿಮ್ಸ್ (ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆಸ್ಪತ್ರೆಯಲ್ಲಿ ಮಾನವೀಯತೆ ಮಣ್ಣುಪಾಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆಯ ಶವ ಪ್ಯಾಕ್ ಮಾಡಲು ಹಾಗೂ ವಾಹನಕ್ಕೆ ಸಾಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಐವರು ಹೊರಗುತ್ತಿಗೆ ನೌಕರರನ್ನು ಅಮಾನತುಗೊಳಿಸಿ ಕಿಮ್ಸ್ ಆಡಳಿತ ಮಂಡಳಿ ಆದೇಶಿಸಿದೆ.
ಘಟನೆಯ ವಿವರ:
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಅಡವಿಬಾವಿ ನಿವಾಸಿ ಗದ್ದೆಮ್ಮಾ (52) ಎಂಬುವವರು ಪಿತ್ತಕೋಶದ ಕಲ್ಲುಗಳ ಸಮಸ್ಯೆಯಿಂದ ಕಳೆದ ಜ.31 ರಂದು ಕಿಮ್ಸ್‌ಗೆ ದಾಖಲಾಗಿದ್ದರು. ಕಳೆದ ಶನಿವಾರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದರು. ಸಾವಿನ ನೋವಿನಲ್ಲಿದ್ದ ಕುಟುಂಬಸ್ಥರಿಗೆ ಆಸ್ಪತ್ರೆಯ ‘ಡಿ ಗ್ರೂಪ್’ ಸಿಬ್ಬಂದಿ ಮತ್ತಷ್ಟು ಆಘಾತ ನೀಡಿದ್ದಾರೆ.
ಹೆಣದ ಮೇಲಿನ ಹಣದ ಹಪಹಪಿ:
ಮೃತ ಗದ್ದೆಮ್ಮಾ ಅವರ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹತ್ತಿಸಲು ಅಲ್ಲಿದ್ದ ಐವರು ಸಿಬ್ಬಂದಿ 500 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಬಡ ಕುಟುಂಬದ ನೋವನ್ನೂ ಅರಿಯದ ಈ ಸಿಬ್ಬಂದಿಗಳು ಸತತ ಪೀಡಿಸಿದಾಗ, ಅಸಹಾಯಕ ಸಂಬಂಧಿಕರು ಅಂತಿಮವಾಗಿ 200 ರೂಪಾಯಿ ನೀಡಿದ್ದಾರೆ. ಆದರೆ, ಅಷ್ಟಕ್ಕೆ ತೃಪ್ತರಾಗದ ಸಿಬ್ಬಂದಿ ಶವವನ್ನು ವಾಹನದಲ್ಲಿ ಇರಿಸಿದ ನಂತರ ಮತ್ತೆ 200 ರೂಪಾಯಿಗಾಗಿ ಪಟ್ಟು ಹಿಡಿದಿದ್ದಾರೆ.
ವೈರಲ್ ವಿಡಿಯೋ ಹಾಗೂ ಕ್ರಮ:
ಸಿಬ್ಬಂದಿಯ ಈ ಅಮಾನವೀಯ ನಡವಳಿಕೆಯಿಂದ ರೋಸಿಹೋದ ಮೃತ ಮಹಿಳೆಯ ಸಂಬಂಧಿಕರು, ಲಂಚ ಕೇಳುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಎಚ್ಚೆತ್ತ ಕಿಮ್ಸ್ ಆಡಳಿತ ಮಂಡಳಿ, ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಎಸಗಿದ ಐವರು ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.