ಡೈಲಿ ವಾರ್ತೆ: ಫೆ./12/2026

ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಫೆ.15ರಿಂದ ವಾರ್ಷಿಕ ವರ್ಧಂತ್ಯುತ್ಸವ: ಧಾರ್ಮಿಕ–ಸಾಂಸ್ಕೃತಿಕ ವೈಭವಕ್ಕೆ ಭರದ ಸಿದ್ಧತೆ

ಬ್ರಹ್ಮಾವರ, ಫೆ.12: ಬಾರ್ಕೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ದೇವಾಡಿಗ ಸಮಾಜದ ಕುಲದೇವಿ ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 15ರಿಂದ 19ರವರೆಗೆ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆಯಲಿವೆ ಎಂದು ದೇವಸ್ಥಾನದ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಜನಾರ್ಧನ ಪಡುಪಣಂಬೂರು ತಿಳಿಸಿದ್ದಾರೆ.

ಗುರುವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.15ರ ಆದಿತ್ಯವಾರ ಉಡುಪಿಯಿಂದ ಶ್ರೀ ದೇವಿ ಸನ್ನಿಧಿಗೆ “ನಮ್ಮ ನಡಿಗೆ ಅಮ್ಮನೆಡೆಗೆ” ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಫೆ.17ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ದೇವಾಡಿಗ ಸಂಘಗಳ ಸದಸ್ಯರು ಹಾಗೂ ಸಮಾಜ ಬಾಂಧವರಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬಾರ್ಕೂರು ಸೇತುವೆ ಬಳಿಯಿಂದ ಪ್ರಾರಂಭವಾಗಿ ಕಾಲ್ನಡಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಲಿದೆ.

ಫೆ.18ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ದೇವಾಡಿಗ ಸಂಘಗಳ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಫೆ.19ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಚಂಡಿಕಾಯಾಗ ಜರುಗಲಿದ್ದು, 10 ಗಂಟೆಯಿಂದ ವಧು-ವರರ ನೋಂದಣಿ ಮತ್ತು ವಧುವರಾನ್ವೇಷಣೆ, ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ವಾರ್ಷಿಕ ವರ್ಧಂತಿಯ ಅಂಗವಾಗಿ ಮಾರ್ಚ್ 2ರಂದು ಸೋಮವಾರ ನವೋತ್ತರ ಶತ 109 ಬ್ರಹ್ಮ ಕುಂಭಾಭಿಷೇಕ, ಪೂರ್ಣಾಹುತಿ ಮತ್ತು ಮಹಾಪೂಜೆ ನಡೆಯಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಯಾದವ ದೇವಾಡಿಗ (ಉಪಾಧ್ಯಕ್ಷರು), ಗಣೇಶ ದೇವಾಡಿಗ ಅಂಬಲಪಾಡಿ (ಪ್ರಧಾನ ಕಾರ್ಯದರ್ಶಿ), ಶ್ರೀ ಸುರೇಶ ಶೇರಿಗಾರ್ ಕೊಡವೂರು (ಉಪಾಧ್ಯಕ್ಷರು), ಶ್ರೀ ಚೆನ್ನಪ್ಪ ಮೊಯಿಲಿ (ಉಪಾಧ್ಯಕ್ಷರು), ಶ್ರೀ ನಾರಾಯಣ ದೇವಾಡಿಗ (ಕೋಶಾಧಿಕಾರಿ), ಶ್ರೀ ವಿ. ರಾಜು ದೇವಾಡಿಗ (ಜತೆ ಕಾರ್ಯದರ್ಶಿ) ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.