ಡೈಲಿ ವಾರ್ತೆ: ಫೆ./12/2026

ಮಣೂರು ಶಾಲೆಯಲ್ಲಿ ‘ಫೋಲ್ಡ್‌ಸ್ಕೋಪ್’ ವಿಜ್ಞಾನ ಕಾರ್ಯಾಗಾರ – ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ಷ್ಮಜಗತ್ತಿನ ಪರಿಚಯ

ಕೋಟ: ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಬೆಳೆಸುವ ಉದ್ದೇಶದಿಂದ ಗೀತಾನಂದ ಫೌಂಡೇಶನ್ ವತಿಯಿಂದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಣೂರಿನಲ್ಲಿ ವಿನೂತನ “ಫೋಲ್ಡ್‌ಸ್ಕೋಪ್” (Origami Microscope) ಕುರಿತ ಉಚಿತ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾಗದದ ಒರಿಗಾಮಿ ಆಧಾರಿತ ಕಡಿಮೆ ವೆಚ್ಚದ ಈ ಮೈಕ್ರೋಸ್ಕೋಪ್ ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ಮುಟ್ಟಿಸುವ ಉದ್ದೇಶದಿಂದ ರೂಪಿಸಲಾಗಿದೆ. “Passive learning” ನಿಂದ “Active 1:1 scientific exploration” ಕಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಪ್ರಯತ್ನವಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಸುಮಾರು 140X ವಿಸ್ತರಣೆ ಸಾಮರ್ಥ್ಯ ಮತ್ತು 2 ಮೈಕ್ರೋನ್ ರೆಸಲ್ಯೂಶನ್ ಹೊಂದಿರುವ ಫೋಲ್ಡ್‌ಸ್ಕೋಪ್ ಹಗುರ, ದೀರ್ಘಕಾಲ ಬಾಳಿಕೆ ಬರುವ ಹಾಗೂ ಎಲ್ಲೆಡೆ ತೆಗೆದುಕೊಂಡು ಹೋಗಬಹುದಾದ ಉಪಕರಣವಾಗಿದೆ. ಒಟ್ಟು 20 ಫೋಲ್ಡ್‌ಸ್ಕೋಪ್ ಕಿಟ್‌ಗಳು ಹಾಗೂ 5 ವಿಶೇಷ ಆಕ್ಸೆಸರೀಸ್ ಕಿಟ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.

4 ಗಂಟೆಗಳ ಅವಧಿಯಲ್ಲಿ ನಡೆದ ಕಾರ್ಯಾಗಾರ ಎರಡು ಹಂತಗಳಲ್ಲಿ ನಡೆಯಿತು. ಮೊದಲ ಹಂತದಲ್ಲಿ ಫೋಲ್ಡ್‌ಸ್ಕೋಪ್ ಅಸೆಂಬ್ಲಿ (ಜೋಡಣೆ) ಕುರಿತು ತರಬೇತಿ ನೀಡಲಾಗಿದ್ದು, ಎರಡನೇ ಹಂತದಲ್ಲಿ ಅದರ ಪ್ರಾಯೋಗಿಕ ಬಳಕೆ ಕುರಿತು ವಿವರಿಸಲಾಯಿತು. ತೇವ ಹಾಗೂ ಒಣ ಮಾದರಿಗಳ ಸಂಗ್ರಹ, ಪೇಪರ್ ಮತ್ತು ಗ್ಲಾಸ್ ಸ್ಲೈಡ್‌ಗಳ ಮೇಲೆ ಮಾದರಿ ಸಿದ್ಧಪಡಿಸುವ ವಿಧಾನ, ಕಣ್ಣಿನಿಂದ, ಮೊಬೈಲ್ ಹಾಗೂ ಪ್ರೊಜೆಕ್ಷನ್ ಮೂಲಕ ವೀಕ್ಷಣೆ ಮಾಡುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಜೊತೆಗೆ ಉಪಕರಣದ ಸಂರಕ್ಷಣೆ ಮತ್ತು ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಾಯಿತು.

Foldscope Community Site “Microcosmos” ನಲ್ಲಿ ನೋಂದಣಿ ಮಾಡಿಕೊಂಡು ಜಾಗತಿಕ ವಿಜ್ಞಾನಿಗಳೊಂದಿಗೆ ಸಂಪರ್ಕ ಸಾಧಿಸುವ ವಿಧಾನವನ್ನೂ ಪರಿಚಯಿಸಲಾಯಿತು.
ಕಾರ್ಯಾಗಾರವನ್ನು ಅಕ್ಷತಾ ನಟೇಶ್ ನಾಯಕ್, ಟ್ರಸ್ಟಿ – ಅಶ್ವತ್ಥ ಎಜುಕೇಶನಲ್ ಫೌಂಡೇಶನ್ ಅವರು ನಡೆಸಿಕೊಟ್ಟರು. ಅವರು 2018ರಿಂದ ಫೋಲ್ಡ್‌ಸ್ಕೋಪ್‌ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿನ 15 ರಾಜ್ಯಗಳಲ್ಲಿ 45ಕ್ಕೂ ಹೆಚ್ಚು ನೇರ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಭೂತಾನ್ ಸೇರಿದಂತೆ 20ಕ್ಕೂ ಹೆಚ್ಚು ವರ್ಚುವಲ್ ಕಾರ್ಯಕ್ರಮಗಳನ್ನು ಸಹ ನಡೆಸಿದ ಅನುಭವ ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸೂಕ್ಷ್ಮಜೀವಿಗಳ ವೀಕ್ಷಣೆಯಲ್ಲಿ ತೊಡಗಿಕೊಂಡರು.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಡೇಯಾಲ್ಬಾಗ್ ಎಜುಕೇಶನಲ್ ಇನ್ಸ್ಟಿಟ್ಯೂಟ್ (ಆಗ್ರಾ) ಹಾಗೂ ಅಶ್ವತ್ಥ ಎಜುಕೇಶನಲ್ ಫೌಂಡೇಶನ್ (ಉಡುಪಿ) ಅವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್‌ಗಳ ಮೂಲಕ ವಿದ್ಯಾರ್ಥಿಗಳನ್ನು ನೋಂದಾಯಿಸಿ ಕಾರ್ಯಾಗಾರವನ್ನು ಪರಿಣಾಮಕಾರಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ವಿವೇಕಾನಂದ ಗಾವಂಕಾರ, ರಾಮದಾಸ್ ನಾಯಕ, ದೈಹಿಕ ಶಿಕ್ಷಕರಾದ ಚಂದ್ರಶೇಖರ ಶೆಟ್ಟಿ ಮತ್ತು ನಾರಾಯಣ ಮೊಗವೀರ, ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರಾಜ್ ಹಾಗೂ ಗೀತಾನಂದ ಫೌಂಡೇಶನ್ ಸಂಯೋಜಕರಾದ ರವಿಕಿರಣ್ ಕೋಟ ಉಪಸ್ಥಿತರಿದ್ದರು.
ಈ ಕಾರ್ಯಾಗಾರವು ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ಷ್ಮಜಗತ್ತಿನ ಪರಿಚಯ ನೀಡುವ ಮೂಲಕ ವಿಜ್ಞಾನವನ್ನು ಕೈಗೆಟುಕುವಂತೆ ತಲುಪಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.