ಡೈಲಿ ವಾರ್ತೆ: ಫೆ./12/2026

ಪೆರ್ನಾಜೆಯಲ್ಲಿ ಗಜರಾಜ ದಾಳಿ: ಅಡಿಕೆ, ಬಾಳೆ ತೋಟ ಹಾನಿ – ಸೋಲಾರ್ ಬೇಲಿ ನಿರ್ವಹಣೆಯಿಲ್ಲದೆ ರೈತರ ಆಕ್ರೋಶ

ಪೆರ್ನಾಜೆ, ಫೆ.12: ಪೆರ್ನಾಜೆ ಗ್ರಾಮದಲ್ಲಿ ಬುಧವಾರ ರಾತ್ರಿ ಗಜರಾಜನ ದಾಳಿಯಿಂದ ಕೃಷಿಕರು ಆತಂಕಕ್ಕೀಡಾದ ಘಟನೆ ನಡೆದಿದೆ. ರಾತ್ರಿ ವೇಳೆ ಗ್ರಾಮಕ್ಕೆ ಬಂದ ಆನೆ, ಕುಮಾರ್ ಪೆರ್ನಾಜೆ ಅವರ ಕೆರೆಯಲ್ಲಿ ಈಜಾಡಿ ನಂತರ ಸಮೀಪದ ಅಡಿಕೆ ಹಾಗೂ ಈಚಲು ಮರಗಳನ್ನು ತಿಂದು ಹಾನಿಗೊಳಿಸಿದೆ.

ಅನಂತರ ಗಜರಾಜ ಸಮೀಪದ ರಾಘವೇಂದ್ರ ಭಟ್ ಅವರ ತೋಟಕ್ಕೆ ನುಗ್ಗಿ ಹತ್ತಕ್ಕೂ ಹೆಚ್ಚು ಬಾಳೆ ಗಿಡಗಳನ್ನು ದ್ವಂಸಗೊಳಿಸಿದ ನಂತರ ಬಂದ ದಾರಿಯಲ್ಲೇ ಹಿಂತಿರುಗಿ ಮುಗೇರು ಗುಡ್ಡಡ್ಕ ಆನೆಗುಂಡಿ ಭಾಗದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೈರನ್ ಮೊಳಗಿಸಿ ಆನೆಯನ್ನು ಕಾಡಿನತ್ತ ಓಡಿಸಲು ಪ್ರಯತ್ನಿಸಿದರು. ಆದರೂ ಗ್ರಾಮದಲ್ಲಿ ಮತ್ತೆ ಆನೆ ಸಂಚರಿಸುವ ಭೀತಿ ರೈತರಲ್ಲಿ ಮುಂದುವರಿದಿದೆ.

ಈ ಪ್ರದೇಶದಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದರೂ, ಅದರ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಪರಿಣಾಮಕಾರಿಯಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿಬಂದಿದೆ. “ನಿರ್ವಹಣೆ ಇಲ್ಲದೆ ಸೋಲಾರ್ ಬೇಲಿ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ” ಎಂದು ಕೃಷಿಕರು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.

ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಒದಗಿಸಬೇಕು ಹಾಗೂ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮತ್ತು ಕೃಷಿಕರು ಒತ್ತಾಯಿಸಿದ್ದಾರೆ.