

ಡೈಲಿ ವಾರ್ತೆ: ಫೆ./12/2026
ಉಡುಪಿ ವಕೀಲರ ಸಂಘ ಅಧ್ಯಕ್ಷರ ವಿರುದ್ಧ ಖಂಡನಾ ನಿರ್ಣಯ – ಆಡಳಿತ ಮಂಡಳಿಯ ಸ್ಪಷ್ಟನೆ

ಉಡುಪಿ, ಫೆ.12: ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ಸಂಘದ ಆಡಳಿತ ಮಂಡಳಿಯ ಪೂರ್ವಾನುಮತಿ ಪಡೆಯದೇ ಹಾಗೂ ಮಂಡಳಿಯ ಗಮನಕ್ಕೆ ತರದೇ ಕೆಲವು ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಸಂಘದ ಆಡಳಿತ ಮಂಡಳಿಯು 10/02/2026ರಂದು ನಡೆದ ಸಭೆಯಲ್ಲಿ ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿದೆ.
ಸಂಘದ ಆಡಳಿತ ಮಂಡಳಿಯ ಆರೋಪದ ಪ್ರಕಾರ, ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಹಾಗೂ ರಾಜಕೀಯ ಪ್ರಭಾವ ಬಳಸಿಕೊಂಡು ಸಂಘದ ಕೆಲ ಸದಸ್ಯರ ವಿರುದ್ಧ ವೈಯುಕ್ತಿಕ ದ್ವೇಷದ ನೆಲೆಯಲ್ಲಿ ಸರ್ಕಾರಕ್ಕೆ ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ಸಲ್ಲಿಸಿರುವುದು ಸಂಘದ ಸದಸ್ಯರ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದಲ್ಲದೆ, ಸಂಘದ ಕೆಲ ಸದಸ್ಯರಿಗೆ ಸಂಬಂಧಿಸಿದ ವೈಯುಕ್ತಿಕ ಪ್ರಕರಣದಲ್ಲಿ ಸದಸ್ಯರ ಹಿತಾಸಕ್ತಿಯನ್ನು ಕಾಪಾಡದೆ, ವಕೀಲರ ಸಂಘದ ಅಧಿಕೃತ ಇಮೇಲ್ ಅನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಯಿತು.
ಮುಂದುವರೆದು, ‘ವಕೀಲರ ಸಂಘ (ರಿ), ಉಡುಪಿ’ ಅಧ್ಯಕ್ಷರ ಹುದ್ದೆಯ ನೆಲೆಯಲ್ಲಿ ಸರ್ಕಾರದ ಯೋಜನೆಗಳು ಹಾಗೂ ಸರಕಾರಿ ಅಧಿಕಾರಿಗಳ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ ಯಾವುದೇ ಆಡಳಿತ ಮಂಡಳಿ ಅನುಮತಿ ಅಥವಾ ಸಂಘದ ನಿರ್ಣಯವಿಲ್ಲದೇ ಪ್ರಕರಣಗಳನ್ನು ದಾಖಲಿಸಿರುವುದು ಕಂಡುಬಂದಿದೆ. ಈ ಸಂಬಂಧ ಉಡುಪಿ ವಕೀಲರ ಸಂಘಕ್ಕೂ ಆ ಪ್ರಕರಣಗಳಿಗೂ ಯಾವುದೇ ಸಂಬಂಧ ಇಲ್ಲವೆಂದು ಆಡಳಿತ ಮಂಡಳಿಯು ಸ್ಪಷ್ಟಪಡಿಸಿದೆ.
ಈ ಕುರಿತು ವಕೀಲರ ಸಂಘ (ರಿ), ಉಡುಪಿ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಂಘದ ಮಾನ್ಯತೆ ಹಾಗೂ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.