ಡೈಲಿ ವಾರ್ತೆ:03 ಏಪ್ರಿಲ್ 2023
ಕೇರಳ: ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನ ಮೇಲೆ ಬೆಂಕಿ ಹಚ್ಚಿದ ಅಪರಿಚಿತ ವ್ಯಕ್ತಿ:ಮಗು ಸೇರಿ ಮೂವರು ಸಾವು, 9ಕ್ಕೂ ಅಧಿಕ ಮಂದಿಗೆ ಗಂಭೀರ ಸ್ವರೂಪದ ಗಾಯ
ಕೇರಳ: ಅಲಫುಝ-ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೋರ್ವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
9ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ.
ರೈಲು ಕೋಝಿಕೋಡ್ ನಗರವನ್ನು ದಾಟಿ ರೈಲು ಕೊರಪುಝ ರೈಲ್ವೆ ಬ್ರಿಡ್ಜ್ ತಲುಪಿದಾಗ ಘಟನೆ ನಡೆದಿದೆ.ಘಟನೆಯ ಬಳಿಕ ಒಂದು ವರ್ಷದ ಮಗು, ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಆ ರೈಲಿನಿಂದ ನಾಪತ್ತೆಯಾಗಿದ್ದರು.ಇವರ ಶವಗಳು ಈಗ ಇಲ್ಲತ್ತೂರು ರೈಲ್ವೆ ನಿಲ್ದಾಣದ ಸಮೀಪದ ಹಳಿಯಲ್ಲಿ ಪತ್ತೆಯಾಗಿದೆ.ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ರೈಲಿನಿಂದ ಕೆಳಗೆ ಬಿದ್ದಿರಬಹುದು ಅಥವಾ ರೈಲಿನಿಂದ ಅವರು ಹಾರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿಯ ಲಗೇಜ್‌ನ್ನು ರೈಲಿನಿಂದ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಪೆಟ್ರೋಲ್ ಇದ್ದ ಬಾಟಲ್ ಇತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಲ್ಲದೆ ದುಷ್ಕರ್ಮಿ ಹೊತ್ತಿ ಉರಿಯಬಲ್ಲ ದ್ರವ ಅಂಶವನ್ನು ಸಹ ಪ್ರಯಾಣಿಕನ ಮೇಲೆ ಚೆಲ್ಲಿ ಬೆಂಕಿ ಹಚ್ಚಿದ್ದಾನೆ. ಇದರಿಂದ ಒಟ್ಟು 9 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದರಲ್ಲೂ ಕೆಲವರಿಗೆ ಶೇ.50 ರಷ್ಟು ಸುಟ್ಟಗಾಯಗಳಾಗಿವೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮತ್ತೊಬ್ಬ ರೈಲ್ವೆ ಅಧಿಕಾರಿ ಹೇಳಿದ್ದಾರೆ. ಆದರೆ ರೈಲ್ವೆ ಟ್ರಾಕ್‌ನಲ್ಲಿ ಸಿಕ್ಕ ಮೃತದೇಹಗಳಲ್ಲಿ ಯಾವುದೇ ಸುಟ್ಟ ಗಾಯದ ಗುರುತಿಲ್ಲ ಎಂದು ಅವರು ಹೇಳಿದರು.