ಡೈಲಿ ವಾರ್ತೆ:06 ಏಪ್ರಿಲ್ 2023

ಆಕಸ್ಮಿಕ ಬೆಂಕಿಯಿಂದ ರಸ್ತೆಯಲ್ಲೇ ಹೊತ್ತಿ ಉರಿದ ವಾಹನ:ಅಪಾರ ನಷ್ಟ

ಹಿರೇಬಾಗೇವಾಡಿ (ಬೆಳಗಾವಿ): ಇಲ್ಲಿನ ಕೆ.ಕೆ.ಕೊಪ್ಪ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ, ತಾಂತ್ರಿಕ ದೋಷದಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ₹5 ಲಕ್ಷ ಹಾನಿಯಾದ ಘಟನೆ ನಡೆದಿದೆ.

ಧಾರವಾಡ ಕಡೆಯಿಂದ ಬೆಳಗಾವಿಗೆ ವಾಷಿಂಗ್ ಮಷಿನ್‌ ಸಾಗಿಸುತ್ತಿದ್ದ ವಾಹನ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ರಸ್ತೆ ಬದಿಗೆ ವಾಹನ ನಿಲ್ಲಿಸಿದ ಚಾಲಕ, ವಾಷಿಂಗ್‌ ಮಷಿನ್‌ಗಳನ್ನು ಕೆಳಗೆ ಇಳಿಸಿದರು. ಆದರೂ ಅಷ್ಟರೊಳಗೆ ಎರಡು ಮಷಿನ್‌ಗಳು ಹಾಗೂ ವಾಹನ ಸಂಪೂರ್ಣ ಸುಟ್ಟಿತು.

ಹೆದ್ದಾರಿಯಲ್ಲಿ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರು. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.