

ಡೈಲಿ ವಾರ್ತೆ: ಫೆ./09/2026
ಓಮನ್‌ನಲ್ಲಿ ಭೀಕರ ರಸ್ತೆ ಅಪಘಾತ: ಉಡುಪಿ ಮೂಲದ ಯುವಕ ಸೇರಿ ಮೂವರು ಸಾವು

ಉಡುಪಿ, ಫೆ. 9: ಓಮನ್ ದೇಶದ ಉತ್ತರ ಅಲ್ ಬಟಿನಾ ಗವರ್ನರೇಟ್‌ನ ಲಿವಾ ವಿಲಾಯತ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಡುಪಿ ಮೂಲದ ಯುವಕನೊಬ್ಬ ಸೇರಿದಂತೆ ಮೂವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಾಪು ತಾಲೂಕಿನ ಉಚ್ಚಿಲ ಸಮೀಪದ ಕಲತ್ತೂರು ನಿವಾಸಿ ಚೇತನ್ (26) ಎಂದು ಗುರುತಿಸಲಾಗಿದೆ.
ಅಪಘಾತವು ಮಸ್ಕತ್ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರುಗಳು ಮತ್ತು ಟ್ರಕ್‌ಗಳ ನಡುವೆ ಸರಣಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ನಡೆದಿದ್ದು, ಪರಿಣಾಮವಾಗಿ ಕೆಲ ಕಾಲ ಭಾರೀ ಟ್ರಾಫಿಕ್ ಅಸ್ತವ್ಯಸ್ತ ಉಂಟಾಯಿತು.
ಅಪಘಾತದ ಬಳಿಕ ಅವಶೇಷಗಳ ನಡುವೆ ಸಿಲುಕಿದ್ದವರನ್ನು ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ತೆರವುಗೊಳಿಸಿದರು.
ವೈದ್ಯಕೀಯ ತಂಡಗಳು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.