

ಡೈಲಿ ವಾರ್ತೆ: ಫೆ./09/2026
ಸಾಂಸ್ಕೃತಿಕ ಕಲಾರಾಧನೆ ಸಮಾಜದ ಮೌಲ್ಯಗಳನ್ನು ಜೀವಂತವಾಗಿಡುತ್ತದೆ: ಕೆ. ಜಯಪ್ರಕಾಶ್ ಹೆಗ್ಡೆ

ಕೋಟ: ಕರಾವಳಿ ಭಾಗದಲ್ಲಿ ಜನಸಾಮಾನ್ಯರೊಂದಿಗೆ ನಿಕಟವಾಗಿ ಸ್ಪಂದಿಸುವ ಜತೆಗೆ ಸಾಂಸ್ಕೃತಿಕ ಕಲಾರಾಧನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಇಂಡಿಕಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಭಾನುವಾರ ಕೋಟದ ಮಣೂರು – ಪಡುಕರೆ ಸಂಯುಕ್ತ ಪ್ರೌಢಶಾಲೆಯ ಗೀತಾನಂದ ರಂಗಮಂದಿರದಲ್ಲಿ ನಡೆದ ಇಂಡಿಕಾ ಕಲಾ ಬಳಗ ಮಣೂರು – ಪಡುಕರೆ ಇದರ 16ನೇ ವರ್ಷದ ‘ಇಂಡಿಕಾ ಸಂಭ್ರಮ–2026’ ಹಾಗೂ ‘ಯಕ್ಷರತ್ನ ಮೊಳಹಳ್ಳಿ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂಡಿಕಾ ಸಂಸ್ಥೆಯನ್ನು ಸ್ಥಾಪಿಸಿದ ಸಂತೋಷ್ ಮೇಷ್ಟ್ರು ಸಮಾಜದ ಬಗ್ಗೆ ಸದಾ ತುಡಿತ ಹೊಂದಿದ್ದವರು. ಅವರ ಅಕಾಲಿಕ ನಿಧನದ ನಂತರವೂ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮುಂದುವರೆಸಿ, ಅವರ ಸ್ಮರಣೆಯನ್ನು ಸದಾ ಜೀವಂತವಾಗಿಟ್ಟಿರುವುದು ಶ್ಲಾಘನೀಯ. ಹಿರಿಯ ಯಕ್ಷಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ ಅವರನ್ನು ಗುರುತಿಸಿ ಪುರಸ್ಕರಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಯಕ್ಷರತ್ನ ಹೆರಿಯ ನಾಯ್ಕ ಇಂಡಿಕಾ ಪುರಸ್ಕಾರವನ್ನು ಹಿರಿಯ ಯಕ್ಷಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ ಅವರಿಗೆ ಗಣ್ಯರು ಪ್ರದಾನಿಸಿದರು.
ವಿಶೇಷ ಅಭಿನಂದನಾ ಭಾಗವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕಲಾವಿದ ಕೋಟ ಸುರೇಶ್ ಬಂಗೇರ, ಮಕ್ಕಳ ತಜ್ಞ ಡಾ. ಸುಧಾಕರ್ ಹಂದೆ ಹಾಗೂ ಸಾಧಕ ವಿದ್ಯಾರ್ಥಿಗಳಾದ ಪೂರ್ವಿ ಆರ್.ಎಸ್. ಮತ್ತು ಶ್ರೀನಿಧಿ ಮರಕಾಲ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಲ್ಲದೆ ಇದೇ ವೇಳೆ ಅಶಕ್ತರಿಗೆ ನೆರವು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಕುಂದಾಪುರದ ಪ್ರಸಿದ್ಧ ಮನೋವೈದ್ಯ ಡಾ. ಪ್ರಕಾಶ್ ಸಿ. ತೋಳಾರ್ ಆಶಯದ ನುಡಿಗಳನ್ನಾಡಿದರು. ಉದ್ಯಮಿ ಬಿಜು ನಾಯರ್ ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಹಿರಿಯ ಕೃಷಿಕ ದಾರೋಜ್ಜಿಮನೆ ಆನಂದ ಮರಕಾಲ, ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಗಾಣಿಗ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಹಾಗೂ ಇಂಡಿಕಾ ಕಲಾ ಬಳಗದ ಪ್ರಮುಖ ನಾಗರಾಜ್ ಮಣೂರು ಉಪಸ್ಥಿತರಿದ್ದರು.
ಇಂಡಿಕಾ ಬಳಗದ ಸಂಚಾಲಕ ಪ್ರಭಾಕರ್ ಪಡುಕರೆ ಸ್ವಾಗತಿಸಿದರು. ಸಂಸ್ಥೆಯ ಮಾರ್ಗದರ್ಶಕ ಟಿ. ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಸಂತೋಷ್ ಕಾಂಚನ್ ನಿರೂಪಿಸಿದರು. ಪತ್ರಕರ್ತ ರವೀಂದ್ರ ಕೋಟ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಯಶಸ್ವಿ ಕಲಾವೃಂದ ‘ಕೊಮೆ’ ಇವರಿಂದ ಗಾನ ವೈಭವ, ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ಪಿಂಗಾರ್ ಕಲಾವಿದರು ಬೆದ್ರ ಇವರಿಂದ ‘ಓಂಕಾರ’ ನಾಟಕ ಪ್ರದರ್ಶನಗೊಂಡಿತು.