ಡೈಲಿ ವಾರ್ತೆ: ಫೆ./10/2026

ಸಾಸ್ತಾನ| ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ: ಓರ್ವನ ಬಂಧನ, ಐಫೋನ್‌ ಹಾಗೂ ನಗದು ವಶ

ಕೋಟ, ಫೆ.09: ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕೋಟ ಪೊಲೀಸ್ ಠಾಣಾ ಸಿಬ್ಬಂದಿ ದಸ್ತಗಿರಿ ಮಾಡಿದ್ದಾರೆ.

World Cup T-20 ಪಂದ್ಯಗಳಿಗೆ ಸಂಬಂಧಿಸಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಹಣ ಸಂಗ್ರಹಿಸಿ, ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.

ಈ ವೇಳೆ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ಸ್ಥಳದಿಂದ ಪರಾರಿಯಾಗಿದ್ದು, ಬೆಟ್ಟಿಂಗ್ ನಡೆಸುತ್ತಿದ್ದ ಹಂಗಾರಕಟ್ಟೆ ಬಾಳ್ಕುದ್ರು ಗ್ರಾಮದ ಮನಿತ್ (26) ಎಂಬ ಯುವಕನನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಬಳಸಲಾಗುತ್ತಿದ್ದ ಐಫೋನ್ ಮೊಬೈಲ್ ಹಾಗೂ ರೂ.800 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತನಿಖೆಯಲ್ಲಿ, ಆರೋಪಿತನು PARKKER777 ಎಂಬ ಆನ್‌ಲೈನ್ ಅಪ್ಲಿಕೇಶನ್ ಬಳಸಿ ಓಮನ್ ಹಾಗೂ ಜಿಂಬಾಂಬ್ವೆ ನಡುವಿನ ನಡೆಯುತ್ತಿರುವ ಪಂದ್ಯಗಳಿಗೆ ಸಂಬಂಧಿಸಿ ಸಂಘಟಿತವಾಗಿ ಬೆಟ್ಟಿಂಗ್ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2026 ಅಡಿಯಲ್ಲಿ BNS ಕಲಂ 112, KP Act ಕಲಂ 78(i)(iii) ಹಾಗೂ IT Act ಕಲಂ 66 ರಂತೆ ಪ್ರಕರಣ ದಾಖಲಿಸಲಾಗಿದೆ.
ಆತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದಾಗಿದೆ.