ಡೈಲಿ ವಾರ್ತೆ:07 ಏಪ್ರಿಲ್ 2023

ದಕ್ಷಿಣಕನ್ನಡ: ವಿದೇಶದಲ್ಲಿ ಉದ್ಯೋಗಕ್ಕೆ ವೀಸಾ ಕೂಡಿಸುವುದಾಗಿ ವಂಚನೆ: ಆರೋಪಿ ಬಂಧನ

ಮಂಗಳೂರು : ವಿದೇಶದಲ್ಲಿ ಉದ್ಯೋಗದ ವೀಸಾ ಕೂಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು 30 ಕ್ಕೂ ಅಧಿಕ ಮಂದಿಯನ್ನು ವಂಚಿಸಿದ ಆರೋಪಿಯನ್ನು ನಗರ ಕಮಿಷನರೇಟ್‌ನ ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಗರದ ಬಿಜೈ ನ್ಯೂರೋಡ್ ಬಳಿಯ ನಿವಾಸಿ ಸುಧೀರ್ ರಾವ್ ವಿ.ಆರ್ (42) ಎಂದು ಗುರುತಿಸಲಾಗಿದೆ. ಈತ ಬಲ್ಗೇರಿಯಾ ದೇಶದಲ್ಲಿ ಉದ್ಯೋಗ ಪಡೆಯಲು ವೀಸಾ ಕೊಡಿಸುವುದಾಗಿ ನಂಬಿಸಿ ಆರೋಪಿಯು ಉದ್ಯೋಗಾಕಾಂಕ್ಷಿಗಳಿಂದ ‌ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದ. ಬಳಿಕ ಉದ್ಯೋಗದ ವೀಸಾವನ್ನು ಕೊಡಿಸದೇ, ಹಣವನ್ನೂ ಮರಳಿಸದೇ ವಂಚಿಸಿದ್ದ.

ಈ ಬಗ್ಗೆ ಸುರತ್ಕಲ್‌, ಮಂಗಳೂರು ಪೂರ್ವ, ಮಂಗಳೂರು ದಕ್ಷಿಣ, ಕಂಕನಾಡಿ ನಗರ, ಮೂಡುಬಿದಿರೆ, ಬಂಟ್ವಾಳ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಆರೋಪಿಯು ಅನೇಕ ಸೋಸೈಟಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದ. ಆತನಿಗೆ ಜಾಮೀನು ಹಾಕಿದವರೂ ಸಂಕಷ್ಟಕ್ಕೆ ಸಿಲುಕಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿದರು. ‘ಆರೋಪಿಯು ಎಂಟಕ್ಕೂ ಅಧಿಕ ಪ್ರಕರಣಗಳಲ್ಲಿ ₹ 50 ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿದ್ದಾನೆ’ ಎಂದು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್ ಆರ್‌. ಜೈನ್‌ ತಿಳಿಸಿದರು. ಸಿಸಿಬಿಯ ಇನ್‌ಸ್ಪೆಕ್ಟರ್‌ ಶ್ಯಾಮ್ ಸುಂದರ್ ಎಚ್‌.ಎಂ ಹಾಗೂ ಪಿಎಸ್‌ಐ ಸುದೀಪ್ ಎಂ.ವಿ ಮತ್ತು ಸಿಬ್ಬಂದಿ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.