ಡೈಲಿ ವಾರ್ತೆ: ಫೆ./27/2026

ಮಂಗಳೂರಿಗೆ ಬಾಡಿಗೆಗೆ ಹೋದ ಚಾಲಕ ನಾಪತ್ತೆ:
ಕಾಪು ಠಾಣೆಯಲ್ಲಿ ಪ್ರಕರಣ ದಾಖಲು

ಕಾಪು, ಫೆ.27: ಮಂಗಳೂರಿಗೆ ಬಾಡಿಗೆಗೆ ತೆರಳಿದ್ದ ಚಾಲಕನೊಬ್ಬ ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಪವಿತ್ರ ಶೆಟ್ಟಿ (33) ಅವರ ಪತಿ ಮಣಿಕಂಠ (36) ಅವರಿಗೆ ಫೆಬ್ರವರಿ 24ರಂದು ರಾತ್ರಿ 9:30ರ ಸುಮಾರಿಗೆ ಮಲ್ಲಾರು ಗ್ರಾಮದ ಜಾಕೀರ್ ಎಂಬುವವರು ಕರೆ ಮಾಡಿ ಮಂಗಳೂರಿಗೆ ಬಾಡಿಗೆ ಇರುವುದಾಗಿ ತಿಳಿಸಿದ್ದರೆಂದು ಹೇಳಲಾಗಿದೆ. ಬಳಿಕ ಮಣಿಕಂಠ ಅವರು ಪಿರ್ಯಾದಿದಾರರ ಅಕ್ಕನ KA-19-MR-5180 ಸಂಖ್ಯೆಯ ಗ್ಲಾಂಜಾ ಕಾರಿನಲ್ಲಿ ತೆರಳಿದ್ದರು.
ಅದೇ ದಿನ ರಾತ್ರಿ 11:15ರ ವೇಳೆಗೆ ಪತ್ನಿ ಕರೆ ಮಾಡಿದಾಗ, “ಮಂಗಳೂರಿಗೆ ಬಾಡಿಗೆಗೆ ಜಾಕೀರ್ ಜೊತೆ ಹೋಗುತ್ತಿದ್ದೇನೆ, ತಡವಾಗಿ ಬರುತ್ತೇನೆ” ಎಂದು ತಿಳಿಸಿದ್ದರೆಂದು ವರದಿಯಾಗಿದೆ. ಆದರೆ ಮರುದಿನದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕ ಸಾಧ್ಯವಾಗಿಲ್ಲ.

ಪವಿತ್ರ ಶೆಟ್ಟಿ ಅವರು ಜಾಕೀರ್ ಅವರ ಬಾವ ಜಿಯಾವುದ್ದೀನ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಜಾಕೀರ್ ಸಹ ಮನೆಗೆ ಬಂದಿಲ್ಲವೆಂದು ತಿಳಿದುಬಂದಿದೆ. ಬಳಿಕ ಉಚ್ಚಿಲ ಹಾಗೂ ಪಡುಬಿದ್ರಿ ಭಾಗಗಳಲ್ಲಿ ಮಣಿಕಂಠ ಹಾಗೂ ಕಾರಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2026ರಡಿ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

ಪೊಲೀಸರು ಮಣಿಕಂಠ ಮತ್ತು ಕಾರಿನ ಸುಳಿವು ಸಿಕ್ಕಲ್ಲಿ ತಕ್ಷಣ ಕಾಪು ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.