ಡೈಲಿ ವಾರ್ತೆ:10 ಏಪ್ರಿಲ್ 2023

ಚಾರ್ಮಾಡ್ ಘಾಟ್ ನಲ್ಲಿ ಕಾರು ಪಲ್ಟಿ: ಮಹಿಳೆ ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಕಾರೊಂದು ಕೊಟ್ಟಿಗೆ ಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ, ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದ ಗಾಯಾಳುಗಳಲ್ಲಿ ಓರ್ವ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಕುಟುಂಬಸ್ಥರು ಕೊಪ್ಪದಲ್ಲಿ ನಿಧನರಾದ ಸಂಬಂಧಿಕರ ಮನೆಗೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಸರೋಜಿನಿ ಮೃತ ಪಟ್ಟಿದ್ದು. ಪುಷ್ಪಾವತಿ, ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್, ಸಾಕ್ಷಿ ಗಂಭೀರ ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಪ್ರಪಾತಕ್ಕೆ ಬಿದ್ದವರನ್ನು ಸ್ಥಳೀಯರ ಸಹಕಾರದೊಂದಿಗೆ ಮೇಲೆತ್ತಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.