ಡೈಲಿ ವಾರ್ತೆ:10 ಏಪ್ರಿಲ್ 2023
ಬಿಜೆಪಿ ಪಟ್ಟಿ ನಾಳೆ ಬಿಡುಗಡೆ : ಪ್ರಹ್ಲಾದ್ ಜೋಶಿ
ನವದೆಹಲಿ : ಎಲ್ಲರೂ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಗಜಪ್ರಸವದಂತೆ ಆಗುತ್ತಿದ್ದು,’ಮಂಗಳವಾರ ಯಾವುದೇ ಕ್ಷಣದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ರಾತ್ರಿ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಹಂತಕ್ಕೆ ಬಂದಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ದೆಹಲಿಯಲ್ಲಿ ಇಲ್ಲದೆ ಇರುವುದರಿಂದ ಅವರ ಜತೆ ಸಮಾಲೋಚನೆ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅನುಮತಿ ಪಡೆದು ಆದಷ್ಟು ಬೇಗ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
”ಗೊಂದಲ ಅನ್ನುವ ಶಬ್ದವೇ ಇಲ್ಲ 13 ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ. ಒಂದು ದಿವಸ ಮುಂಚೆ ನಾವು ಬಿಡುಗಡೆ ಮಾಡುತ್ತೇವೆ. ನಾಳೆ(ಮಂಗಳವಾರ) ಯಾವುದೇ ಕ್ಷಣದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಲಿಸ್ಟ್ ಬಂದ ನಂತರ ಅಚ್ಚರಿ ಏನು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದರು.
ಬಹಳ ದೊಡ್ಡ ಮಟ್ಟದಲ್ಲಿ ನಾವು ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ. ಕೊನೆಯ ಕ್ಷಣದಲ್ಲಿ ಕೆಲವ ಬದಲಾವಣೆ ಆಗುತ್ತದೆ. ಎಚ್ಚರಿಕೆಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.