ಡೈಲಿ ವಾರ್ತೆ:12 ಏಪ್ರಿಲ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

ಶಿವಮೊಗ್ಗ: ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಈ ಕೆಲಸ ಮಾಡಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು, ನನ್ನ ಮಗಳು ಬಿಜೆಪಿ ಸೇರುತ್ತಿರುವುದನ್ನು ನನ್ನ ಕನಸಿನಲ್ಲಿಯೂ ನಾನು ಯೋಚನೆ ಮಾಡಿರಲಿಲ್ಲ. ನಾನು ಮೊದಲಿನಿಂದಲೂ ರಾಜಕೀಯದಲ್ಲಿ ಸ್ಥಿರತೆ ಬದ್ದತೆಯನ್ನು ಇಟ್ಟುಕೊಂಡು ಬಂದಿದ್ದೇನೆ ಅದೇ ರೀತಿಯಲ್ಲಿ ನನ್ನ ವ್ಯಕ್ತಿತ್ವವನ್ನು ಅನುಷ್ಟಾನಗೊಳಿಸಿಕೊಂಡು ಹೋಗಿದ್ದೇನೆ. ಆ ಸಂತೋಷ ನನಗೆ ಇದೆ. ಇಂತಾ ಸನ್ನಿವೇಶದಲ್ಲಿ ಮಗಳು ಬಿಜೆಪಿ ಸೇರುತ್ತಿರುವುದು ಎದೆಗೆ ಚೂರಿ ಹಾಕಿದಂತಾಗಿದೆ. ಈ ಕೆಲಸ ಅವಳು ಮಾಡಬಾರದಿತ್ತು. ಇದರ ಹಿಂದೆ ಶಾಸಕ ಹೆಚ್. ಹಾಲಪ್ಪ ಹರತಾಳು ಅವರ ಕುತಂತ್ರವಿದೆ. ಹಾಲಪ್ಪ ಇತಂಹ ಕೆಲಸ ಮಾಡಬಾರದಿತ್ತು ಎಂದರು.

ಮಗಳನ್ನು ಮನವೊಲಿಸಲು ದೂರವಾಣಿ ಮಾಡಿದರೂ ನನಗೆ ಸಿಗಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಇದೇ ಮನೆಯಲ್ಲಿ ಮಗಳು ಇದ್ದಳು. ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾಳೆ. ಆದರೆ ಈಗ ತಿಳಿಯಿತು ಅವಳು ಬಿಜೆಪಿ ಸೇರಿದ್ದಾಳೆ ಎನ್ನುವುದು. ಅವಳಿಗೆ ಪಕ್ಷದ ಮೇಲೆ ಇದ್ದ ಬೇಸರ ನನ್ನ ಹತ್ತಿರ ಎಂದಿಗೂ ಹೇಳಿಕೊಳ್ಳಲಿಲ್ಲ. ರಾಜಕೀಯದಲ್ಲಿ ಬೆಳೆಯಬೇಕಾದ ಅನೇಕ ಅವಕಾಶಗಳು ಇವೆ. ಟಿಕೆಟ್ ನೀಡುವ ಕುರಿತಂತೆ ನಾನೇ ಬೆಂಗಳೂರಿಗೆ ಹೋಗಿ ಸ್ನೇಹಿತ ಖರ್ಗೆ ಅವರಲ್ಲಿ ಹೇಳಿದ್ದೆ. ಆದರೆ ಪಕ್ಷದ ತೀರ್ಮಾನ ಎಲ್ಲರೂ ಒಪ್ಪುವ ವಿಷಯವಾಗಿದೆ. ಇದನ್ನೇ ಇಟ್ಟುಕೊಂಡು ಶಾಸಕ ಹಾಲಪ್ಪ ಮನೆ ಒಡೆಯುವ ಹಂತಕ್ಕೆ ಇಳಿಯಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷ ಕೊಡುವುದು ಒಂದೇ,ಮನೆ ಒಡೆಯುವುದು ಒಂದೇ. ಇಂತಾ ಕೆಲಸ ಹಾಲಪ್ಪ ಮಾಡಿರುವುದು ನಮಗೆ ಅತ್ಯಂತ ನೋವಾಗಿದೆ. ಕ್ಷೇತ್ರದ ಜನರಲ್ಲಿ ನಾನು ಹೇಳುವುದೇನಂದರೆ ನನ್ನ ಮಗಳು ಅಂತ ಭಾವಿಸಿಕೊಂಡು ಅವಳಿಗೆ ಯಾವುದೇ ಸಹಕಾರವನ್ನು ನೀಡಬೇಡಿ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ ಮುಂದೆಯೂ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಅವರನ್ನು ಬೆಂಬಲಿಸಿ ಎಂದು ಈ ಮೂಲಕ ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದರು.

ಕಾಗೋಡು ಪುತ್ರಿ ರಾಜನಂದಿನಿ ಇಂದು ಬೆಂಗಳೂರು ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.