

ಡೈಲಿ ವಾರ್ತೆ: ಫೆ./09/2026
ಉಡುಪಿ| ವಸತಿಗೃಹದಲ್ಲಿ ಯಾತ್ರಾರ್ಥಿ ಅಕಾಲಿಕ ಸಾವು – ಕುರ್ಚಿಯಲ್ಲೇ ನಿಶ್ಚೇಷ್ಟ ಸ್ಥಿತಿಯಲ್ಲಿ ಪತ್ತೆ!

ಉಡುಪಿ, ಫೆ.09: ನಗರದ ಹಳೆ ಸರಕಾರಿ ಬಸ್ ನಿಲ್ದಾಣದ ಸಮೀಪದಲ್ಲಿರುವ ವಸತಿಗೃಹವೊಂದರಲ್ಲಿ ಯಾತ್ರಾರ್ಥಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಮೃತಪಟ್ಟಿರುವ ದುರ್ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಕೊಠಡಿಯಿಂದ ಬಹುಕಾಲ ಹೊರಬಾರದಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ವಸತಿಗೃಹದ ಸಿಬ್ಬಂದಿ ಬಾಗಿಲು ತೆರೆಯಲಾಗಿದ್ದು, ಒಳಗಿದ್ದ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರನ್ನು ದಾವಣಗೆರೆ ಜಿಲ್ಲೆಯ ನಿವಾಸಿ ಮಹಾಂತೇಶ ಎಂ.ಜಿ. ಎಂದು ಗುರುತಿಸಲಾಗಿದೆ.
ಮೃತ ಮಹಾಂತೇಶ ಅವರು ಮನೆಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು ಎನ್ನಲಾಗಿದೆ. ಆದರೆ ಉಡುಪಿ ನಗರದಲ್ಲಿರುವ ವಸತಿಗೃಹದಲ್ಲಿ ತಂಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಎಸ್‌ಐ ನಾರಾಯಣ, ಎಎಸ್‌ಐ ಹರೀಶ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಆಶಾಲತಾ ಭೇಟಿ ನೀಡಿ, ಮೃತನ ಪತ್ನಿ ಮತ್ತು ಅಣ್ಣನ ಸಮ್ಮುಖದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು.
ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಪ್ರಾಥಮಿಕವಾಗಿ ಅನಾರೋಗ್ಯದಿಂದ ಸಾವಾಗಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.