

ಡೈಲಿ ವಾರ್ತೆ: ಫೆ./09/2026
ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ: ಚೂರಿ ಇರಿದು ದುಷ್ಕರ್ಮಿಗಳು ಪರಾರಿ

ಬೆಳ್ತಂಗಡಿ, ಫೆ. 9 :ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಪಹರಿಸಲು ಮೂವರು ದುಷ್ಕರ್ಮಿಗಳು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಸುದೆಮುಗೇರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
16 ವರ್ಷದ ವಿದ್ಯಾರ್ಥಿನಿ ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಪ್ರತಿದಿನದಂತೆ ಇಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಸ್ಕೂಟರ್‌ನಲ್ಲಿ ಸಂತೆಕಟ್ಟೆ ಬಳಿ ಬಸ್ ಹತ್ತಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಸಂದರ್ಭ ಮಾರುತಿ ಓಮ್ಮಿ ಕಾರಿನಲ್ಲಿ ಆಗಮಿಸಿದ ಮೂವರು ಅಪರಿಚಿತರು ಬಾಲಕಿಯ ಸ್ಕೂಟರ್‌ಗೆ ಅಡ್ಡಗಟ್ಟಿ, ಬಲವಂತವಾಗಿ ಕಾರಿನೊಳಗೆ ಎಳೆಯಲು ಯತ್ನಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಕಾರಿನ ನಂಬರ್ ಪ್ಲೇಟ್‌ಗೆ ಬಟ್ಟೆ ಕಟ್ಟಲಾಗಿದ್ದು, ಕಾರಿನಲ್ಲಿದ್ದ ಮೂವರು ಯುವಕರು ಮುಖಕ್ಕೂ ಬಟ್ಟೆ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಬಾಲಕಿಯನ್ನು ಕಾರಿನೊಳಗೆ ಎಳೆಯುವ ವೇಳೆ ಆಕೆ ಬೊಬ್ಬೆ ಹೊಡೆದು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾಳೆ.
ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಮತ್ತೊಂದು ಸ್ಕೂಟರ್ ಆಗಮಿಸುತ್ತಿದ್ದುದನ್ನು ಗಮನಿಸಿದ ದುಷ್ಕರ್ಮಿಗಳು ಬಾಲಕಿಯನ್ನು ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ವಿದ್ಯಾರ್ಥಿನಿಯ ಕೈ ಹಾಗೂ ಬೆರಳಿಗೆ ಚೂರಿಯಿಂದ ಚುಚ್ಚಿದ ಗಾಯಗಳಾಗಿದ್ದು, ಕಾಲೇಜು ಬ್ಯಾಗ್ ಅನ್ನು ದುಷ್ಕರ್ಮಿಗಳು ಕಾರಿನಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ಬಾಲಕಿಯನ್ನು ತಕ್ಷಣ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ವಿವಿಧ ಕೋನಗಳಿಂದ ತನಿಖೆ ಕೈಗೊಳ್ಳಲಾಗಿದೆ.