ಡೈಲಿ ವಾರ್ತೆ: ಫೆ./09/2026

ಕುಂದಾಪುರ| ಅಂಗನವಾಡಿ ಶಾಲೆಯೊಳಗೆ ಕುಡಿದು ಗೂಂಡಾಗಿರಿ – ಪ್ರಶ್ನಿಸಿದ ಯುವಕನ ಮುಖಕ್ಕೆ ಬಾಟಲಿಯಿಂದ ಹಲ್ಲೆ

ಕುಂದಾಪುರ :ಅಂಗನವಾಡಿ ಶಾಲೆಯೊಳಗೆ ಮದ್ಯಪಾನ ನಡೆಸುತ್ತಿದ್ದವರನ್ನು ಪ್ರಶ್ನಿಸಿದ ಯುವಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕರ್ಕಿ ಅಂಗನವಾಡಿ ಶಾಲೆ ಆವರಣದಲ್ಲಿ ನಡೆದಿದೆ.

ಹಟ್ಟಿಯಂಗಡಿ ಗ್ರಾಮ ನಿವಾಸಿ ವಿನಯ್ (32) ಅವರು ನೀಡಿದ ದೂರಿನ ಪ್ರಕಾರ, ಫೆ.8 ರಂದು ಬೆಳಿಗ್ಗೆ ಸುಮಾರು 1 ಗಂಟೆಯ ವೇಳೆಗೆ ಕರ್ಕಿ ಅಂಗನವಾಡಿ ಶಾಲೆಯ ಸಮೀಪದ ಯಕ್ಷಿ ಗ್ರೌಂಡ್‌ನಲ್ಲಿ ಆಯೋಜಿಸಲಾಗಿದ್ದ ಕ್ರಿಕೇಟ್ ಪಂದ್ಯಾಟ ಮುಗಿದ ನಂತರ, ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತರಾದ ಲೋಕೇಶ್ ಮತ್ತು ಸುದರ್ಶನ ಸ್ವತ್ತುಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ವೇಳೆ ಶಾಲೆಯ ಒಳಭಾಗದಲ್ಲಿ ಆರೋಪಿತ ಪ್ರಸಾದ್ @ ರಬಡ ಹಾಗೂ ಮತ್ತೊಬ್ಬ ವ್ಯಕ್ತಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದುದನ್ನು ಗಮನಿಸಿದ ಲೋಕೇಶ್ ಅವರು, “ಸಣ್ಣ ಮಕ್ಕಳು ಕಲಿಯುವ ಅಂಗನವಾಡಿ ಶಾಲೆಯೊಳಗೆ ಮದ್ಯಪಾನ ನಡೆಸುವುದು ಸೂಕ್ತವಲ್ಲ, ಬೇರೆ ಸ್ಥಳಕ್ಕೆ ಹೋಗಿ” ಎಂದು ಹೇಳಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿತ ಪ್ರಸಾದ್ @ ರಬಡ, ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ಅಲ್ಲಿಯೇ ಒಡೆದು, ಅದರಿಂದ ಲೋಕೇಶ್ ಅವರ ತಲೆಗೆ ಜೋರಾಗಿ ಹೊಡೆದಿದ್ದಾರೆ. ಲೋಕೇಶ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಬಾಟಲಿಯ ಪೆಟ್ಟು ಮುಖಕ್ಕೆ ಬಿದ್ದು ತೀವ್ರ ಸ್ವರೂಪದ ರಕ್ತ ಗಾಯ ಉಂಟಾಗಿದೆ.

ಘಟನೆಯ ವೇಳೆ ಆರೋಪಿತನೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿ “ಬಿಡಬೇಡ, ಅವನಿಗೆ ಹೊಡಿ” ಎಂದು ಪ್ರಚೋದನೆ ನೀಡಿ, ನಂತರ ಕತ್ತಲೆಯೊಳಗೆ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೊಳಗಾದ ಲೋಕೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಲಾಗಿದೆ.

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2026 ಅಡಿ, ಭಾರತೀಯ ನ್ಯಾಯ ಸಂಹಿತೆಯ ಕಲಂ 352, 351(2), 118(1), 109 R/W 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.