ಡೈಲಿ ವಾರ್ತೆ: ಫೆ./09/2026

ಕೋಟೇಶ್ವರ ಎನ್.ಆರ್. ಆಸ್ಪತ್ರೆಯಲ್ಲಿ ಮೊಬೈಲ್ ನೆಟ್‌ವರ್ಕ್ ಮೌನ: ತುರ್ತು ಸಂದರ್ಭಗಳಲ್ಲಿ ರೋಗಿಗಳ ಕುಟುಂಬಸ್ಥರ ಪರದಾಟ

ಕೋಟೇಶ್ವರ: ಕೋಟೇಶ್ವರ ಪಟ್ಟಣದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಎನ್.ಆರ್. ಆಸ್ಪತ್ರೆಯ ಒಳಗಡೆ ಮೊಬೈಲ್ ನೆಟ್‌ವರ್ಕ್ ಲಭ್ಯವಿಲ್ಲದೆ, ರೋಗಿಗಳ ಕುಟುಂಬಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಜೀವನ್ ಮಿತ್ರ ನಾಗರಾಜ್ ಪುತ್ರನ್ ಕೋಟ ಅವರು ಪ್ರತಿಕ್ರಿಯಿಸಿ, “ತುರ್ತು ಚಿಕಿತ್ಸೆಗೆಂದು ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ, ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.

ಅಪಘಾತದಲ್ಲಿ ಗಾಯಗೊಂಡವರನ್ನು ಕರೆತಂದರೆ, ಪೇಷಂಟ್ ಮನೆಯವರಿಗೆ ತಕ್ಷಣ ಮಾಹಿತಿ ನೀಡಲು, ತುರ್ತು ರಕ್ತದ ವ್ಯವಸ್ಥೆಗೆ ಸಂಪರ್ಕಿಸಲು ಅಥವಾ ಬೇರೆ ಯಾವುದೇ ತುರ್ತು ವಿಚಾರದಲ್ಲಿ ಹೊರಗಿನವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.

ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಗಂಭೀರ ಪ್ರಕರಣಗಳ ವೇಳೆ ಆಸ್ಪತ್ರೆಯ ಒಳಗಡೆಯೇ ಮೊಬೈಲ್ ಮೂಲಕ ಸಂಪರ್ಕ ಸಾಧ್ಯವಾಗದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿದೆ. ಈ ಸಮಸ್ಯೆಯನ್ನು ಹಲವು ಬಾರಿ ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದರೂ, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

ಮೊಬೈಲ್ ನೆಟ್‌ವರ್ಕ್ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಅಸಮಾಧಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ತುರ್ತು ಸೇವೆ ನೀಡುವ ಆಸ್ಪತ್ರೆಯಲ್ಲಿ ಈ ರೀತಿಯ ಮೂಲಭೂತ ಸೌಲಭ್ಯಗಳ ಕೊರತೆ ಅತ್ಯಂತ ಗಂಭೀರ ವಿಷಯವಾಗಿದ್ದು, ಇದು ರೋಗಿಗಳ ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆಯನ್ನೂ ನಿರಾಕರಿಸಲಾಗದು.

ಈ ಹಿನ್ನೆಲೆ, ಎನ್.ಆರ್. ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣವೇ ಎಚ್ಚೆತ್ತುಕೊಂಡು, ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಲಾಗಿದೆ.