

ಡೈಲಿ ವಾರ್ತೆ: ಫೆ./09/2026
ಸಾಲಿಕೇರಿ ಬಸ್ ನಿಲ್ದಾಣದಲ್ಲಿ ನೂತನ ತಂಗುದಾಣ ಲೋಕಾರ್ಪಣೆ: ಸಾರ್ವಜನಿಕ ಸೇವೆಗೆ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯ ಕೊಡುಗೆ

ಬ್ರಹ್ಮಾವರ: ಪ್ರಯಾಣಿಕರ ಅನುಕೂಲಕ್ಕಾಗಿ ಸಾಲಿಕೇರಿ ಬಸ್ ನಿಲ್ದಾಣದಲ್ಲಿ ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಸಾಲಿಕೇರಿ ಸಂಸ್ಥೆಯ ವತಿಯಿಂದ ನೂತನ ತಂಗುದಾಣವನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕರಾದ ಸಂಪತ್ ಕುಮಾರ್ ಶೆಟ್ಟಿ, “ನಮ್ಮ ಉದ್ಯಮ ಕ್ಷೇತ್ರದಲ್ಲಿ 15 ವರ್ಷಗಳಲ್ಲಿ ಸಾಧಿಸಿದ್ದನ್ನು ಬ್ರಹ್ಮಾವರದ ಸಾಲಿಕೇರಿಯಲ್ಲಿ ಕೇವಲ ಒಂದು ವರ್ಷದಲ್ಲೇ ಸಾಧಿಸಲು ಸಾಧ್ಯವಾಯಿತು. ಇದಕ್ಕೆ ಇಲ್ಲಿನ ದೈವದೇವರ ಅನುಗ್ರಹ ಹಾಗೂ ಊರಿನ ಜನರ ಸಹಕಾರವೇ ಕಾರಣ. ಆದ್ದರಿಂದ ಮುಂದಿನ ದಿನಗಳಲ್ಲಿಯೂ ಊರಿನ ಅಭಿವೃದ್ಧಿಗೆ ಸದಾ ಜೊತೆಯಾಗಿರುತ್ತೇವೆ” ಎಂದು ತಿಳಿಸಿದರು.

ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಮಾತನಾಡಿ, “ಕ್ರಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯು ಸಾವಿರಾರು ಬಡ ವರ್ಗದ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ ಸಮಾಜದ ಹೊಟ್ಟೆ ತುಂಬಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದ ಸಂಸ್ಥೆಗೆ ಸದಾ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು” ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಾರಂಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದೇವಾನಂದ್ ನಾಯಕ್, ಜಿಎಂ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಪ್ರಕಾಶ್ ಚಂದ್ರ ಶೆಟ್ಟಿ, ಸಾಲಿಕೇರಿ ಶ್ರೀ ವೀರಭದ್ರ ದೇವಸ್ಥಾನದ ಧರ್ಮದರ್ಶಿ ಸುರೇಶ್ ಶೆಟ್ಟಿಗಾರ್ ಸೇರಿದಂತೆ ನಾಗೇಶ್, ಹರೀಶ್ ಶೆಟ್ಟಿ, ಉಮಾಬಾಯಿ ಅಶೋಕ್, ನಿರಂಜನ್ ಶೆಟ್ಟಿ, ನಾಗೇಶ್ ಮಹೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ವಾರಂಬಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ್ ಕಾರ್ಯಕ್ರಮವನ್ನು ನಿರ್ವಹಿಸಿ, ಎಲ್ಲರನ್ನು ಸ್ವಾಗತಿಸಿದರು.