ಡೈಲಿ ವಾರ್ತೆ:14 ಏಪ್ರಿಲ್ 2023
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ: ಕೆಆರ್‌ಪಿಪಿಯಿಂದ ಸ್ಪರ್ಧೆ ಸಾಧ್ಯತೆ
ಹೊಸದುರ್ಗ: ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೊಸದುರ್ಗದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಅವರು “ನಾನು ಈಗಾಗಲೇ ಪ್ರಚಾರ ಆರಂಭಿಸಿಯಾಗಿದೆ. ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ” ಎಂದಿದ್ದಾರೆ.
ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ 2008 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡರೆ 2013 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. 2018 ರಲ್ಲಿ ಬಿಜೆಪಿ ಸೇರಿ ಕಾಂಗ್ರೆಸ್‌ನ ಬಿ.ಜಿ ಗೋವಿಂದಪ್ಪನವರ ಎದುರು 25,992 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅವರ ಬದಲಿಗೆ ಎಸ್.ಲಿಂಗಮೂರ್ತಿಯವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಬಿ.ಜಿ ಗೋವಿಂದಪ್ಪನವರಿಗೆ ಮತ್ತೆ ಟಿಕೆಟ್ ನೀಡಿದೆ.
ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೂಳಿಹಟ್ಟಿ ಶೇಖರ್, “ಸಾಮಾನ್ಯ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ವಿಫಲವಾಗಿದೆ. ಹೀಗಾಗಿ ಬೇಸರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಟಿಕೆಟ್ ನೀಡಿದರೆ ಆ ಪಕ್ಷದಿಂದ ಸ್ಪರ್ಧಿಸುವೆ” ಎಂದಿದ್ದಾರೆ.
“ಜನಾರ್ದನ ರೆಡ್ಡಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುವುದು ಸತ್ಯ. ನನ್ನನ್ನು ನಂಬಿಕೊಂಡಿರುವ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡಲಾರೆ” ಎಂದು ತಿಳಿಸಿದ್ದಾರೆ.
“2018ರಲ್ಲಿ ಬಿಜೆಪಿ ಸೇರುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಕಾರಣನಾಗಿದ್ದೆ. ಇದೀಗ ಸಾಮಾಜಿಕ ನ್ಯಾಯ ಎಂದು ಪ್ರಸ್ತಾಪಿಸುವ ಮೂಲಕ ನನ್ನನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಯಡಿಯೂರಪ್ಪ ಅವರ ಶಿಷ್ಯ ಹಾಗೂ ಅವರ ಮಗ ವಿಜಯೇಂದ್ರರ ಗೆಳೆಯನಿಗೆ ಟಿಕೆಟ್ ನೀಡಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.