ಡೈಲಿ ವಾರ್ತೆ: ಫೆ./10/2026

ಮದುವೆ ಭರವಸೆ – ಮತಾಂತರ ಆರೋಪ: ಪತ್ನಿ ಹಾಗೂ ಮಗು ಬಿಟ್ಟು ಪರಾರಿಯಾದ ಪತಿ ವಿರುದ್ಧ ದೂರು

ಬೆಂಗಳೂರು: ಬೆಂಗಳೂರಿನಲ್ಲಿ ಮದುವೆ ಭರವಸೆ ನೀಡಿ ಮತಾಂತರಗೊಳಿಸಿದ ಬಳಿಕ ಪತ್ನಿ ಹಾಗೂ ಮಗುವನ್ನು ಬಿಟ್ಟು ಪರಾರಿಯಾದ ಆರೋಪದ ಕುರಿತು ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ದೂರುದಾರೆಯ ಪ್ರಕಾರ, ಬಿಟಿಎಂ ಲೇಔಟ್ ನಿವಾಸಿ ಸೈಯದ್ ಇಮ್ತಿಯಾಜ್ ಎಂಬ ಯುವಕ ಸಾಮಾಜಿಕ ಜಾಲತಾಣದ ಮೂಲಕ ಕೋಲ್ಕತ್ತಾ ಮೂಲದ ಬ್ರಾಹ್ಮಣ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಇಸ್ಲಾಂಗೆ ಮತಾಂತರಗೊಳಿಸಿ ಹೆಸರನ್ನು ಜೈನಬ್ ಎಂದು ಬದಲಿಸಿದ್ದಾನೆ ಎಂಬ ಆರೋಪವನ್ನು ಯುವತಿ ಮಾಡಿದ್ದಾರೆ.

ದೂರುನೀಡಿರುವ ಯುವತಿ ಹೇಳುವಂತೆ, 2025ರ ಜುಲೈ 18ರಂದು ಇಬ್ಬರೂ ನೋಂದಾಯಿತ ವಿವಾಹ ಮಾಡಿಕೊಂಡಿದ್ದು, ನಂತರ ಕೋಲ್ಕತ್ತಾಕ್ಕೆ ತೆರಳಿ ಅಲ್ಲೇ ನೆಲೆಸಿದ್ದರು. ಈ ಅವಧಿಯಲ್ಲಿ ಯುವತಿಗೆ ಹೆಣ್ಣುಮಗು ಜನಿಸಿದ್ದು, ಮಗುವಿನ ಜನನದ ನಂತರ ಪತಿ ಆಕೆಯನ್ನೂ ಮಗುವನ್ನೂ ಬಿಟ್ಟು ಸಂಪರ್ಕ ಕಡಿದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಪತ್ನಿ ಹಾಗೂ ಮಗುವಿನ ನಿರ್ವಹಣೆ, ಭದ್ರತೆ ಮತ್ತು ನ್ಯಾಯಕ್ಕಾಗಿ ಯುವತಿ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿ, ಪತಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅವರ ದೂರಿನ ಮೇರೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಅಂಶಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.