ಡೈಲಿ ವಾರ್ತೆ: ಫೆ./10/2026

ಕಂಡ್ಲೂರು| ವರಾಹಿ ನದಿಯಲ್ಲಿ ಅಕ್ರಮ ಮರಳು ದಂಧೆ – ಪೊಲೀಸರ ಭರ್ಜರಿ ಕಾರ್ಯಚರಣೆ, 4 ದೋಣಿ, 11 ಆರೋಪಿಗಳ ಬಂಧನ

ಕುಂದಾಪುರ, ಫೆ.10: ವರಾಹಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ದಂಧೆಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಭೇದಿಸಿರುವ ಘಟನೆ ಮಂಗಳವಾರ ಬೆಳಗಿನ ಜಾವ ಕಂಡ್ಲೂರು ಬ್ರಿಡ್ಜ್ ಸಮೀಪ ನಡೆದಿದೆ.

ಈ ಸಂಬಂಧ KRIDL ಮರಳು ಧಕ್ಕೆಯ ಸೂಪರ್ ವೈಸರ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ಕು ಮರಳು ತುಂಬಿದ ದೋಣಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಫೆ. 10 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಕಂಡ್ಲೂರು ಬ್ರಿಡ್ಜ್ ಕೆಳಭಾಗದಲ್ಲಿ ದೋಣಿಗಳ ಮೂಲಕ ಅಕ್ರಮವಾಗಿ ಮರಳು ತುಂಬಲಾಗುತ್ತಿದೆ ಎಂಬ ಖಚಿತ ಮಾಹಿತಿ ಕುಂದಾಪುರ ವೃತ್ತದ ಪೊಲೀಸ್ ನಿರೀಕ್ಷಕ ಸಂತೋಷ ಎ. ಕಾಯ್ಕಿಣಿ ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ವರಾಹಿ ನದಿಯಲ್ಲಿ ದೋಣಿಗಳಲ್ಲಿ ಮರಳು ತುಂಬುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.

ಪೊಲೀಸರನ್ನು ಗಮನಿಸಿದ ಆರೋಪಿಗಳು ದೋಣಿಗಳನ್ನು ನದಿಯ ಪೊದೆಯ ಕಡೆಗೆ ತೆಗೆದುಕೊಂಡು ಹೋಗಿ ಅಡಗಿಕೊಂಡಿದ್ದರು. ಬಳಿಕ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ, ಸಮೀಪದ ಹಳ್ನಾಡು KRIDL ಮರಳು ಧಕ್ಕೆಯ ಮೂಲಕ ದೋಣಿಯಲ್ಲಿ ತೆರಳಿ ಆರೋಪಿಗಳನ್ನು ಪತ್ತೆಹಚ್ಚಿ ನಾಲ್ಕು ದೋಣಿಗಳನ್ನು ಮರಳು ಸಮೇತ ವಶಕ್ಕೆ ಪಡೆಯಲಾಗಿದೆ.

ಪಂಚರ ಸಮಕ್ಷಮ ವಿಚಾರಣೆ ನಡೆಸಿದಾಗ, ಬಂಧಿತ ಆರೋಪಿಗಳು ಹಳ್ನಾಡು KRIDL ಮರಳು ಧಕ್ಕೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಮರಳು ಧಕ್ಕೆಯ ಮಾಲಕ ಸುನೀಲ್ ಶೆಟ್ಟಿ ಹಾಗೂ ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ಅವರು ಉತ್ತಮ ಗುಣಮಟ್ಟದ ಮರಳು ತಂದರೆ ಹೆಚ್ಚುವರಿ ಹಣ ನೀಡುವುದಾಗಿ ಪ್ರೇರೇಪಿಸಿದ್ದರಿಂದ, ಜಿಯೋ ಪೆನ್ಸಿಂಗ್ ಬೌಂಡರಿಯ ಆಚೆಗೆ ತೆರಳಿ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ದಾಳಿಯ ವೇಳೆ ಹಳದಿ ಬಣ್ಣದ ನಾಲ್ಕು ದೋಣಿಗಳು (ಅಂದಾಜು ಮೌಲ್ಯ ಪ್ರತಿ ದೋಣಿ ರೂ.75,000), ಸುಮಾರು 3½ ಯುನಿಟ್ ಮರಳು (ಅಂದಾಜು ಮೌಲ್ಯ ರೂ.4,500) ಹಾಗೂ ನಾಲ್ಕು ಬಿದಿರಿನ ತೊಳೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026 ರಂತೆ BNS ಕಲಂ 303(2) r/w 3(5), MMDR ಕಾಯ್ದೆ ಹಾಗೂ ಕರ್ನಾಟಕ ಲಘು ಖನಿಜ ನಿಯಮಗಳು–1994ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ಸೇರಿದಂತೆ ಎಲ್ಲಾ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.