

ಡೈಲಿ ವಾರ್ತೆ: ಫೆ./10/2026
76ನೇ ಭಾರತೀಯ ದಂತ ವೈದ್ಯರ ಸಮಾವೇಶ:
IDA ಉಡುಪಿ ಘಟಕಕ್ಕೆ 6 ರಾಷ್ಟ್ರೀಯ ಪ್ರಶಸ್ತಿಗಳು – ಡಾ. ಯು.ಬಿ. ಶಬರಿ ನೇತೃತ್ವದ ತಂಡದ ಅಪೂರ್ವ ಸಾಧನೆ

ಮಂಗಳೂರು, ಫೆ.10: ಮಂಗಳೂರಿನಲ್ಲಿ ನಡೆದ 76ನೇ ಭಾರತೀಯ ದಂತ ವೈದ್ಯರ ಸಮಾವೇಶದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಉಡುಪಿ ಘಟಕವು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. IDA ಉಡುಪಿ ಘಟಕದ ಮೊದಲ ಮಹಿಳಾ ಅಧ್ಯಕ್ಷೆ ಡಾ. ಯು.ಬಿ. ಶಬರಿ ಅವರ ನೇತೃತ್ವದ ತಂಡವು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಪ್ರಶಸ್ತಿಗಳನ್ನು ಡಾ. ಯು.ಬಿ. ಶಬರಿ, ಡಾ. ಅತುಲ್ ಯು.ಆರ್, ಡಾ. ಕೈಲ್ಕೆರೆ ಸುಜನ್ ಶೆಟ್ಟಿ, ಡಾ. ಶ್ರೀಧರ್ ಶೆಟ್ಟಿ ಹಾಗೂ ಡಾ. ಪ್ರತೀಕ್ಷಾ ಶೆಟ್ಟಿ ಅವರು ಸ್ವೀಕರಿಸಿದರು.
ಇಂಡಿಯನ್ ಡೆಂಟಲ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷರಾದ ಡಾ. ನಿಖಿಲ್ ಬಾರ್ವೆ, ರಾಷ್ಟ್ರೀಯ ಕಾರ್ಯದರ್ಶಿ ಡಾ. ಅಶೋಕ್ ಧೋಬ್ಲೆ, ಡಾ. ಅಜಿತ್ ಕದಮ್ ಹಾಗೂ ಡಾ. ಪ್ರಮೋದ್ ಶೆಟ್ಟಿ ಇವರು ಪ್ರಶಸ್ತಿ ವಿಜೇತರಿಗೆ ಗೌರವ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, IDA ಉಡುಪಿ ಘಟಕವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ನೀಡುತ್ತಿರುವ ನಿರಂತರ ಸೇವೆ ಶ್ಲಾಘನೀಯವಾಗಿದ್ದು, ಡಾ. ಯು.ಬಿ. ಶಬರಿ ಅವರ ನಾಯಕತ್ವವು ಇತರ ಘಟಕಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
IDA ಉಡುಪಿ ಘಟಕದ ಈ ಸಾಧನೆ ಉಡುಪಿ ಜಿಲ್ಲೆಯ ದಂತ ವೈದ್ಯಕೀಯ ಕ್ಷೇತ್ರಕ್ಕೆ ಹೆಮ್ಮೆ ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವ ವಿಶ್ವಾಸವನ್ನು ಮೂಡಿಸಿದೆ ಎಂದು ಹೇಳಿದರು.