ಡೈಲಿ ವಾರ್ತೆ: ಫೆ./10/2026

ಬಿ.ಕೆ. ಹರಿಪ್ರಸಾದ್‌ಗೆ ಡಿಸಿಎಂ ಸ್ಥಾನ ನೀಡಿ: ರಾಜ್ಯ ಸರ್ಕಾರಕ್ಕೆ ಅಹಿಂದ ಸಂಘಟನೆಯ ಆಗ್ರಹ

ಬೆಂಗಳೂರು, ಫೆ.10: ಶೋಷಿತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಹಿಂದ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತಿಕೊಂಡು ಬಂದಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಕೆ. ಹರಿಪ್ರಸಾದ್ ಅವರು ಕೇವಲ ರಾಜಕೀಯ ನಾಯಕರಷ್ಟೇ ಅಲ್ಲ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದಾರೆ. ಜಾತಿ ಗಣನೆಯಂತಹ ಸಂವೇದನಾಶೀಲ ಹಾಗೂ ಐತಿಹಾಸಿಕ ಮಹತ್ವದ ವಿಷಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರ ದಿಟ್ಟ ಹಾಗೂ ಸ್ಪಷ್ಟ ನಿಲುವು ತಳೆದ ನಾಯಕರು ಎಂದು ಹೇಳಿದರು.

ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ರಾಜಕೀಯದ ಕೇಂದ್ರಬಿಂದುವಾಗಿಸಿಕೊಂಡು ಬಿ.ಕೆ. ಹರಿಪ್ರಸಾದ್ ನಡೆಸಿರುವ ಹೋರಾಟ ಅಹಿಂದ ಚಳವಳಿಗೆ ಹೊಸ ಶಕ್ತಿ ನೀಡಿದೆ. ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಆಡಳಿತಕ್ಕೆ ರಾಜಕೀಯವಾಗಿ ಹಾಗೂ ನೈತಿಕವಾಗಿ ಬಲ ತುಂಬಿದ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಮುಖರಾಗಿದ್ದಾರೆ ಎಂದು ಮುತ್ತಣ್ಣ ಶಿವಳ್ಳಿ ಹೇಳಿದರು.


ಪಕ್ಷದ ಒಳಗೂ ಹೊರಗೂ ಅಹಿಂದ ಸಮುದಾಯದ ಧ್ವನಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸಿರುವ ಇಂತಹ ನಾಯಕರನ್ನು ಸಂಪುಟಕ್ಕೆ ಸೇರಿಸುವುದು ಸರ್ಕಾರದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸುವ ಜೊತೆಗೆ ಸ್ವಚ್ಛ ಹಾಗೂ ಜನಪರ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂದರು.

ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ಸೇರಿದಲ್ಲಿ ಸರ್ಕಾರಕ್ಕೆ ಮಾತ್ರವಲ್ಲ, ಅಹಿಂದ ಸಂಘಟನೆಗಳಿಗೂ ಹೊಸ ಉತ್ಸಾಹ ಹಾಗೂ ಶಕ್ತಿ ದೊರಕಲಿದೆ. ಅಹಿಂದ ಸಮುದಾಯದ ಆಶಯಗಳು ಮತ್ತು ಹೋರಾಟಗಳು ಆಡಳಿತದ ಉನ್ನತ ಮಟ್ಟದಲ್ಲಿ ಪ್ರತಿಫಲಿಸುವ ವಿಶ್ವಾಸ ಜನರಲ್ಲಿ ಮೂಡಲಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಹಿಂದ ಸಮಾಜದ ವತಿಯಿಂದ ಸಭೆಗಳು, ಚರ್ಚೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಒಬಿಸಿ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ಬಿ. ಶಿವಣ್ಣ ಸೇರಿದಂತೆ ಅಹಿಂದ ಕಾರ್ಯಕರ್ತರು ಹಾಗೂ ಬಿ.ಕೆ. ಹರಿಪ್ರಸಾದ್ ಬೆಂಬಲಿಗರು ಉಪಸ್ಥಿತರಿದ್ದರು.