ಡೈಲಿ ವಾರ್ತೆ:15 ಏಪ್ರಿಲ್ 2023
ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿಯಾಲು ಉದಯ ಶೆಟ್ಟಿ
ಕಾರ್ಕಳ: ನಿರೀಕ್ಷೆಯಂತೆ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಹೊಸದಿಲ್ಲಿಯಲ್ಲಿ ಎಐಸಿಸಿ ಇಂದು ಬಿಡುಗಡೆಗೊಳಿಸಿದ ಮೂರನೇ ಪಟ್ಟಿಯಲ್ಲಿ ಕಾರ್ಕಳದಿಂದ ಉದಯ ಶೆಟ್ಟಿ ಸ್ಥಾನ ಪಡೆದಿದ್ದಾರೆ. ಸಾಮಾಜಿಕ ಕಾರ್ಯಕರ್ತರೂ, ಪಿಡಬ್ಲ್ಯುಡಿ ಕ್ಲಾಸ್1 ಗುತ್ತಿಗೆದಾರರೂ ಆಗಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ ಆಯ್ಕೆ ಖಚಿತವಾಗಿದ್ದರೂ, ರಾಜಕೀಯ ಕಾರಣಗಳಿಗಾಗಿ ಮೊದಲೆರಡು ಪಟ್ಟಿಯಲ್ಲಿ ಅವರ ಹೆಸರು ಸ್ಥಾನ ಪಡೆದಿರಲಿಲ್ಲ.
33 ವರ್ಷ ಪ್ರಾಯದ (ಜನನ 1990 ಅ.24) ಮುನಿಯಾಲಿನ ಉದಯಕುಮಾರ್ ಶೆಟ್ಟಿ ಅವರು 2018ರಲ್ಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಕೊನೆಯ ಕ್ಷಣದಲ್ಲಿ ತಪ್ಪಿತ್ತು. ಆಗ ಗೋಪಾಲ ಭಂಡಾರಿ ಅವರನ್ನೇ ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದರು.
ಈ ಬಾರಿಯೂ ಕಾರ್ಕಳದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಸದಿದ್ದ ಉದಯ ಕುಮಾರ್ ಶೆಟ್ಟಿ ಅವರ ಹೆಸರನ್ನು ವೀರಪ್ಪ ಮೊಯ್ಲಿ ಅವರು ಅದೇ ಕಾರಣಕ್ಕಾಗಿ ವಿರೋಧಿಸಿದ್ದರು ಎಂದು ತಿಳಿದುಬಂದಿದೆ. ಕಾರ್ಕಳದಿಂದ ಸ್ಪರ್ಧಿಸಲು ಹೆಬ್ರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ ಹಾಗೂ ಹಿರಿಯ ಸದಸ್ಯ ಡಿ.ಆರ್.ರಾಜು ಅರ್ಜಿ ಸಲ್ಲಿಸಿದ್ದು ಅವರಲ್ಲೊಬ್ಬರಿಗೆ ಟಿಕೆಟ್ ನೀಡಿ ಎಂದು ಮೊಯ್ಲಿ ಒತ್ತಾಯಿಸಿದ್ದರೆಂದು ತಿಳಿದುಬಂದಿದೆ.
ಅಲ್ಲದೇ ಕಳೆದ ವರ್ಷ ಬಿಜೆಪಿ ಸರಕಾರದ ಮೇಲೆ ಶೇ.40 ಕಮಿಷನ್ ಪಡೆಯುವ ಗುರುತರ ಆರೋಪ ಕೇಳಿಬಂದಾಗ ಉದಯಕುಮಾರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ ‘ನಾವು ಗುತ್ತಿಗೆದಾರರು ಯಾರಿಗೂ ಕಮಿಷನ್ ನೀಡುತ್ತಿಲ್ಲ.’ ಎಂದು ಹೇಳಿರುವುದು ಕೂಡಾ ಅವರ ವಿರೋಧಿಗಳಿಗೆ ಅಸ್ತ್ರವಾಗಿ ಒದಗಿಬಂದಿತ್ತು ಎನ್ನಲಾಗಿದೆ.
ಆದರೆ ಸಾಮಾಜಿಕ ಕಾರ್ಯಕರ್ತರಾಗಿ ಹೆಬ್ರಿ, ಕಾರ್ಕಳದಲ್ಲಿ ಜನಪ್ರಿಯರಾಗಿರುವ ಹಾಗೂ ಕೊಡುಗೈ ದಾನಿಯೂ ಆಗಿರುವ ಯುವ ಗುತ್ತಿಗೆದಾರ ಉದಯಕುಮಾರ್ ಶೆಟ್ಟಿ ಅವರ ಬಗ್ಗೆ ವರಿಷ್ಠರು ಒಲವು ತೋರಿದ್ದು, ಕಳೆದ ಬಾರಿ ಅವಕಾಶ ವಂಚಿತ ಅವರಿಗೆ ಈ ಬಾರಿ ಟಿಕೇಟ್ ನೀಡಲು ನಿರ್ಧರಿಸಿದರು ಎಂದು ಹೇಳಲಾಗಿದೆ.