ಡೈಲಿ ವಾರ್ತೆ:15 ಏಪ್ರಿಲ್ 2023

ಬಂಟ್ವಾಳ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್

ಬಂಟ್ವಾಳ: ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶನಿವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆಗೈದು ಸಹಸ್ರಾರು ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯ ಮೂಲಕ ಸಾಗಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಉಷಾ ಆರ್.ನಾಯ್ಕ್ ದಂಪತಿ ಪ್ರಾರ್ಥನೆ ನೆರವೇರಿಸಿದ್ದು, ಬಿ.ಫಾರ್ಮ್ ಹಾಗೂ ನಾಮಪತ್ರ ದಾಖಲೆಗಳಿಗೆ ಪೂಜೆ ಸಲ್ಲಿಸಲಾಯಿತು. ಪಾದಯಾತ್ರೆಯ ಸಂದರ್ಭದಲ್ಲಿ ಕಾರ್ಯಕರ್ತರು ಬಿಜೆಪಿ ಪಕ್ಷದ ಧ್ವಜ ಹಿಡಿದು ಪಕ್ಷದ ಜತೆಗೆ ರಾಜೇಶ್ ನಾಯ್ಕ್ ಅವರಿಗೆ ಜೈಕಾರ ಕೂಗಿದರು.

ಪಾದಯಾತ್ರೆ ಮುಂದೆ ಸಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಸೇರಿಕೊಂಡಿದ್ದು, ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಕಾರ್ಯಕರ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಿತ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕಾಲ್ನಡಿಗೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಪೊಳಲಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪುರಸಭಾ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಉದಯಕುಮಾರ್ ರಾವ್, ಜಿ.ಪಂ.ಮಾಜಿ ಸದಸ್ಯರಾದ ಕಮಲಾಕ್ಷಿ ಕೆ.ಪೂಜಾರಿ, ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಮುಂಬಯಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಜಿ.ಶೆಟ್ಟಿ ದಳಂದಿಲ, ಮುಂಬಯಿನ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಪಕ್ಷದ ಜಿಲ್ಲೆ, ಕ್ಷೇತ್ರ ಮಟ್ಟದ ಪದಾಧಿಕಾರಿಗಳು, ಹಿರಿಯ ಕಾರ್ಯಕರ್ತರು, ರಾಜೇಶ್ ನಾಯ್ಕ್ ಕುಟುಂಬದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.