ಡೈಲಿ ವಾರ್ತೆ:16 ಏಪ್ರಿಲ್ 2023

ಸಂಧಾನ ಸಭೆ ವಿಫಲ: ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ಘೋಷಿಸಿದ ಜಗದೀಶ್‌ ಶೆಟ್ಟರ್‌

ಹುಬ್ಬಳ್ಳಿ : ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಜಗದೀಶ್‌ ಶೆಟ್ಟರ್‌ ಅವರು ತಮ್ಮ ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದರು.

ಹುಬ್ಬಳ್ಳಿಯಲ್ಲಿ ಸಿಎಂ ಮತ್ತು ಕೇಂದ್ರ ಸಚಿವರ ಸಂಧಾನ ಸಭೆ ಬಳಿಕ ಮಾಹಿತಿ ನೀಡಿದ ಅವರು, ಭಾನುವಾರ ಶಿರಸಿಗೆ ತೆರಳಿ ವಿಧಾನಸಭೆ ಸ್ಪೀಕರ್‌ ಕಾಗೇರಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ದಶಕಗಳ ಕಾಲ ಬಿಜೆಪಿ ಕಟ್ಟಿ ಬೆಳೆಸಿದ್ದ ಹಿರಿಯ ನಾಯಕರೊಬ್ಬರು ಟಿಕೆಟ್‌ ಸಿಗದ ಕಾರಣ ಪಕ್ಷವನ್ನು ತೊರೆದಂತಾಗಿದೆ.

ಸಿಎಂ-ಕೇಂದ್ರ ಸಚಿವರ ಸಂಧಾನ ಸಭೆ ವಿಫಲ:
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶೆಟ್ಟರ್‌ ಅವರಿಗೆ ಟಿಕೆಟ್‌ ಘೋಷಣೆಯಾಗದ ಕಾರಣ ಬಂಡಾಯ ಎದ್ದಿದ್ದರು. ಅವರನ್ನು ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಧರ್ಮೇಂದ್ರ ಪ್ರಧಾನ್‌ ಅವರು ಶನಿವಾರ ತಡರಾತ್ರಿ ಭೇಟಿ ಮಾಡಿ ಸಮಾಧಾನ ಪಡಿಸುವ ಪಯತ್ನ ಮಾಡಿದರು. ಆದರೆ, ಸಂಧಾನ ಸಭೆ ವಿಫಲವಾಗಿದ್ದು, ಸಭೆಯ ಬಳಿಕ ಶೆಟ್ಟರ್‌ ರಾಜೀನಾಮೆ ಘೋಷಣೆ ಮಾಡಿದರು.

ನಾಲ್ಕು ದಿನ ಟಿಕೆಟ್‌ಗಾಗಿ ಸರ್ಕಸ್‌ ಮಾಡಿದ ಶೆಟ್ಟರ್‌:
ಈ ಬಾರಿ ವಿಧಾನಸಭೆ ಚುನಾವಣೆಗೆ ಏ.11 ಎಂದು ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಯಿತು. ಆದರೆ, 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ ಹೆಸರು ಇರಲಿಲ್ಲ. ಈ ಹಿನ್ನೆಲೆ ಅವರು ಬೇಸರಗೊಂಡಿದ್ದರು. ಕೂಡಲೇ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದೆಹಲಿಗೆ ಕರೆಸಿಕೊಂಡು ಮಾತನಾಡಿದರು. ದೆಹಲಿಯಿಂದ ವಾಪಾಸ್‌ ಆದ ಬಳಿಕವೂ ಶೆಟ್ಟರ್‌ ನನಗೆ ಟಿಕೆಟ್‌ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಬುಧವಾರ (ಏ.12) ಘೋಷಣೆಯಾಗದ ಬಿಜೆಪಿ ಎರಡನೇ ಪಟ್ಟಿಯಲ್ಲಿಯೂ ಜಗದೀಶ್‌ ಶೆಟ್ಟರ್‌ ಹೆಸರಿರಲಿಲ್ಲ. ಆ ಬಳಿಕ ಶೆಟ್ಟರ್‌ ಅವರ ಬಂಡಾಯ ಜೋರಾಯ್ತು. ಕೇಂದ್ರ ಸಚಿವ ಜೋಶಿ ಸೇರಿದಂತೆ ಹಲವು ನಾಯಕರು ಮನವೊಲಿಸಲು ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕೊನೆಗೆ ಸಿಎಂ ಸಭೆಯು ವಿಫಲವಾಗುತ್ತಿದ್ದಂತೆ ಶೆಟ್ಟರ್‌ ರಾಜೀನಾಮೆ ನೀಡುವುದಾಗಿ ಮಾಧ್ಯಮಗಳಿಗೆ ಘೋಷಿಸಿದರು.

ಮುಂದಿನ ನಡೆ ತಿಳಿಸದ ಶೆಟ್ಟರ್‌:
ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಜಗದೀಶ್‌ ಶೆಟ್ಟರ್‌ ಮುಂದೆ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಅಥವಾ ಪಕ್ಷೇತರವಾಗಿ ಚುನಾವಣೆ ನಿಲ್ಲುತ್ತಾರೆಯೇ ಎಂಬ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಭಾನುವಾರ ಅಧಿಕೃತ ರಾಜೀನಾಮೆ ಬಳಿಕ ಸ್ಪಷ್ಟವಾಗಿ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್‌ನಿಂದ ಶೆಟ್ಟರ್‌ಗೆ ಸ್ವಾಗತ:
ಕಳೆದ ನಾಲ್ಕೈದು ದಿನಗಳ ಹಿಂದಿನಿಂದಲೇ ಬಿಜೆಪಿ ಟಿಕೆಟ್‌ ಸಿಗದೇ ಕಂಗಾಲಾಗಿದ್ದ ಜಗದೀಶ್‌ ಶೆಟ್ಟರ್‌ ಅವರಿಗೆ ಕಾಂಗ್ರೆಸ್‌ ಸೇರ್ಪಡೆ ಆಫರ್‌ ಬಂದಿತ್ತು. ಸ್ವತಃ ಸಿದ್ದರಾಮಯ್ಯ ಅವರೇ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತ ಎಂದು ಹೇಳಿಕೆ ನೀಡದ್ದರು. ಇತ್ತೀಚೆಗೆ ಬಿಜೆಪಿ ತೊರೆದಿದ್ದ ಲಕ್ಷ್ಮಣ ಸವದಿ ಕೂಡ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.