ಡೈಲಿ ವಾರ್ತೆ: ಫೆ./09/2026

ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.19ರಿಂದ ಏಕಪವಿತ್ರ ಶ್ರೀಮನ್ನಾಗಮಂಡಲ: ಕೃಷಿ, ಸಂಸ್ಕೃತಿ, ಆಧ್ಯಾತ್ಮದ ಅಪೂರ್ವ ಸಂಗಮ

ಮುನಿಯಾಲು, ಫೆ.9: ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ ಶ್ರೀಮತಿ ಸವಿತಾ ಆರ್. ಆಚಾರ್ ಹಾಗೂ ಡಾ. ಜಿ. ರಾಮಕೃಷ್ಣ ಆಚಾರ್, ಶ್ರೀಮತಿ ಅನುಷಾ ಆಚಾರ್–ಪ್ರಜ್ವಲ್ ಆಚಾರ್, ಶ್ರೀಮತಿ ಪೂಜಾ ಆಚಾರ್–ತೇಜಸ್ ಆಚಾರ್, ರಕ್ಷಿತ್ ಆಚಾರ್ ಹಾಗೂ ಕುಟುಂಬದ ಆಶ್ರಯದಲ್ಲಿ “ಏಕಪವಿತ್ರ ಶ್ರೀಮನ್ನಾಗಮಂಡಲ, ಪ್ರಕೃತಿಯಿಂದ ಪ್ರಕೃತಿಗೆ” ಎಂಬ ಧಾರ್ಮಿಕ ಸೇವೆ ಫೆಬ್ರವರಿ 19, 20 ಹಾಗೂ 21ರಂದು ನಡೆಯಲಿದೆ ಎಂದು ಡಾ. ಜಿ. ರಾಮಕೃಷ್ಣ ಆಚಾರ್ ತಿಳಿಸಿದರು.

ಸೋಮವಾರ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರಂಗ್ರಪಾಡಿಯ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ, ಶ್ರೀ ವಾಸುದೇವ ಭಟ್ ಅವರ ಸಹಯೋಗದೊಂದಿಗೆ, ಪಾತ್ರಿಗಳಾದ ಶ್ರೀ ರಾಮಚಂದ್ರ ಕುಂಜಿತ್ತಾಯ ಹಾಗೂ ಶ್ರೀ ಗೋಳಿಅಂಗಡಿ ಸುಬ್ರಹ್ಮಣ್ಯ ವೈದ್ಯರ ಮೇಳದೊಂದಿಗೆ ನಿಸರ್ಗಮಯ ಪರಿಸರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಗುರುವಾರ, ಫೆ.19ರಂದು ಬೆಳಿಗ್ಗೆ 8.30ರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.

ಶುಕ್ರವಾರ, ಫೆ.20ರಂದು ಶ್ರೀನಿವಾಸ ಸಭಾ ಮಂಟಪದಲ್ಲಿ ಕೃಷಿ ವಿಚಾರಗೋಷ್ಠಿಗಳು, ಯಕ್ಷಗಾನ ವಲ್ಲರಿ ಹಾಗೂ ಸಂಜೆ 5ಕ್ಕೆ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರಿಗೆ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಶನಿವಾರ, ಫೆ.21ರಂದು ಮಧ್ಯಾಹ್ನ 12.30ರಿಂದ ಶ್ರೀ ಭವಾನಿ ಭೋಜನಾಲಯದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಸಭಾ ಮಂಡಲ ಕಾರ್ಯಕ್ರಮ, ರಾತ್ರಿ 8ಕ್ಕೆ ಹಾಲಿಟ್ಟು ಸೇವೆ ಹಾಗೂ ನಂತರ ಶ್ರೀಮನ್ನಾಗಮಂಡಲ ಸೇವೆ ನೆರವೇರಲಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಪುತ್ರ ರಕ್ಷಿತ್ ಆಚಾರ್, ನಾಗಮಂಡಲ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ನಾಗಮಂಡಲ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.