ಡೈಲಿ ವಾರ್ತೆ:18 ಏಪ್ರಿಲ್ 2023

ಯಕ್ಷಕಲೆಯನ್ನು ಅರಿತು ಬಡಿಸಿದರೆ ಯಶಸ್ಸು ಸಾಧ್ಯ: ಪ್ರಸಾದ್ ಕುಮಾರ್ ಮೊಗೆಬೆಟ್ಟು

ಹೆಮ್ಮಾಡಿ: ಸಾಂಸ್ಕøತಿಕವಾಗಿ ಕಲೆಯ ಹೂರಣವನ್ನು ತಾವು ಸಂಪೂರ್ಣವಾಗಿ ಸವಿದರೆ ಇತರರಿಗೆ ಬಡಿಸುವುದಕ್ಕೆ ಹಿತವೆನಿಸುತ್ತದೆ. ಯಶಸ್ವೀ ಕಲಾವೃಂದದ ಚಿಣ್ಣರು ಯಕ್ಷಕಲೆಯನ್ನು ಅರಿತು ಬಡಿಸುವ ಮೂಲಕ ರಂಗದಲ್ಲಿನ ಪ್ರದರ್ಶನವನ್ನು ಯಶಸ್ವೀಗೊಳಿಸಿದ್ದಾರೆ. ಪ್ರಸಂಗದ ಪ್ರಥಮ ಪ್ರದರ್ಶನ ಯಶಸ್ಸು ಗಳಿಸಿದ ಮಕ್ಕಳ ಲೋಕದಲ್ಲಿ ಭಾಗಿಯಾಗುವ ಅವಕಾಶ ಲಭ್ಯವಾದದ್ದಕ್ಕೆ ಹರ್ಷವಾಗುತ್ತಿದೆ ಎಂದು ಹವ್ಯಾಸಿ ಯಕ್ಷ ಬಳಗಗಳ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿಪ್ರಾಯಪಟ್ಟರು.

ಶ್ರೀ ಬಟ್ಟೆ ವಿನಾಯಕ ದೇವಸ್ಥಾನ ದೇವಲ್ಕುಂದ ನಾಲ್ಕನೇ ವರ್ಷದ ಪ್ರತಿಷ್ಠಾ ವದ್ರ್ಯಂತೋತ್ಸವದ ಅಂಗವಾಗಿ ಏಪ್ರಿಲ್ 16ರಂದು ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಮಕ್ಕಳ ಮೇಳದ ಯಕ್ಷಗಾನದಲ್ಲಿ ಗೌರವ ಸಲ್ಲಿಸಿಕೊಂಡು ಮೊಗೆಬೆಟ್ಟು ಮಾತನ್ನಾಡಿದರು.


ದೇಗುಲದ ಆಡಳಿತ ಮಂಡಳಿ ಹಾಗೂ ಶ್ರೀ ಬಟ್ಟೆ ವಿನಾಯಕ ಸ್ವಯಂ ಸೇವಾ ಸಂಘದ ಸದಸ್ಯರಾದ ಸಕರಾಮ ಟಿ. ನಾಯ್ಕ, ರಾಘವೇಂದ್ರ ಮೊಗವೀರ, ಪ್ರಭಾಕರ ಗಾಣಿಗ, ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಮುಖ್ಯ ಕಲಾವಿದೆಯಾದ ಕು. ಪೂಜಾ ಆಚಾರ್ ಉಪಸ್ಥಿತರಿದ್ದರು. ಬಳಿಕ ಯಶಸ್ವೀ ಕಲಾವೃಂದದ ಮಕ್ಕಳಿಂದ ‘ಸುಧನ್ವಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ರಂಗದಲ್ಲಿ ಪ್ರಸ್ತುತಗೊಂಡಿತು.