ಡೈಲಿ ವಾರ್ತೆ:19 ಏಪ್ರಿಲ್ 2023
ಕೋಟ: ಕಂಟೈನರ್ ಲಾರಿ ಹಾಗೂ ಕಾರು ನಡುವೆ ಅಪಘಾತ: ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಪ್ರಾಣಾಪಾಯದಿಂದ ಪಾರು!
ಕೋಟ: ಕಾರು ಹಾಗೂ ಕಂಟೈನರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಪವಾಡ ಸದೃಷವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ತೆಕ್ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿತ್ತು.
ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಕಂಟೈನರ್ ಲಾರಿಯು ಹೆದ್ದಾರಿಯಲ್ಲಿ ಕೆಟ್ಟು ನಿಂತಿತ್ತು. ಲಾರಿಯವರು ಯಾವುದೇ ಅಪಾಯ ಸೂಚನಾ ಫಲಕ ಅಳವಡಿಸದೆ ನಿರ್ಲಕ್ಷ್ಯವಹಿಸಿದ್ದರು.
ಈ ವೇಳೆ ಕೋಟದಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಕಾರು ಕಂಟೈನರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಎರಡು ಏರ್ ಬ್ಯಾಗ್ ಗಳು ತೆರೆದುಕೊಂಡಿದ್ದರಿಂದ ಕಾರು ಚಲಾಯಿಸುತ್ತಿದ್ದ ವಕೀಲ ಸೋಮನಾಥ್ ಹೆಗ್ಡೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಟ ಪೊಲೀಸರು ಅಪಘಾತದ ಸ್ಥಳಕ್ಕಾಗಮಿಸಿ ಕಾರು ಹಾಗೂ ಕಂಟೈನರ್ ಲಾರಿಯನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ಅಲ್ಲಲ್ಲಿ ವಾಹನಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ದೊಡ್ಡ ದೊಡ್ಡ ಬಹುಚಕ್ರದ ಲಾರಿಗಳು, ಕಂಟೈನರ್ ಗಳು ಕೆಟ್ಟುಹೋದಾಗ, ಸಂಬಂಧಿಸಿದವರು ಅವನ್ನು ಬದಿಗೆ ಸರಿಸುವ ಯಾವ ಯತ್ನವನ್ನೂ ಮಾಡದೆ, ನಡು ರಸ್ತೆಯಲ್ಲೇ ರಿಪೇರಿಗೆ ತೊಡಗುತ್ತಾರೆ. ರಾತ್ರಿವೇಳೆ ಯಾವುದೇ ಸೂಚನಾ ದೀಪಗಳನ್ನೂ ಅಳವಡಿಸುವುದಿಲ್ಲ. ಇದು ಹೆದ್ದಾರಿಯಲ್ಲಿ ವೇಗವಾಗಿ ಬರುವ ಇತರ ವಾಹನಗಳವರಿಗೆ ತೀರಾ ಅಪಾಯಕಾರಿಯಾಗಿದೆ. ಮಾತ್ರವಲ್ಲ, ಹೆದ್ದಾರಿಯಲ್ಲಿ ಅಳವಡಿಸಿದ್ದ ದಾರಿ ದೀಪಗಳೂ ಸಮರ್ಪಕವಾಗಿ ಬೆಳಗದೆ ಇಂತಹ ಅಪಾಯಗಳಿಗೆ ಕಾರಣವಾಗುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ಜರುಗಿಸಬೇಕಾಗಿದೆ.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷರೂ, ಜನಪ್ರಿಯ ವಕೀಲರೂ ಆಗಿದ್ದು, ಹಲವು ಸಾಮಾಜಿಕ ಚಟುವಟಿಕೆಗಳು, ಸಂಘ – ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಬನ್ನಾಡಿ ಸೋಮನಾಥ ಹೆಗ್ಡೆಯವರ ಕಾರು ಅಪಘಾತಾಕ್ಕೊಳಗಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಅವರ ಸಹೋದ್ಯೋಗಿಗಳು, ಹಿತೈಷಿಗಳು, ಮಿತ್ರರು ಕರೆ ಮಾಡಿ ಯೋಗಕ್ಷೇಮ ವಿಚಾರಿಸತೊಡಗಿದ್ದಾರೆ. ತಾನು ಕ್ಷೇಮವಾಗಿರುವೆ ಎಂಬುದನ್ನು ಹೆಗ್ಡೆಯವರ ಬಾಯಿಂದಲೇ ಕೇಳಿ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.