ಡೈಲಿ ವಾರ್ತೆ:21 ಏಪ್ರಿಲ್ 2023
ಬೆಂಗಳೂರು: ಕೋರ್ಟ್ ಆವರಣದಲ್ಲೇ ವಕೀಲರ ಮೇಲೆ ಯುವತಿಯೊಬ್ಬಳು ಚಾಕುವಿನಿಂದ ಹಲ್ಲೆ.!
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣವನ್ನು ಮುಂದುವರಿಸುವುದಾಗಿ ಹೇಳಿದ ವಕೀಲರ ಮೇಲೆ ಯುವತಿಯೊಬ್ಬಳು ನ್ಯಾಯಾಲಯದ ಆವರಣದಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಕಾರ್ಪೊರೇಷನ್ ಸರ್ಕಲ್ ಬಳಿಯಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾದ ಕಾಂಚನ ಎಂಬ ಯುವತಿ ವಕೀಲ ಕೃಷ್ಣಾರೆಡ್ಡಿ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾಳೆ.
ಘಟನೆ ನಂತರ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕೃಷ್ಣಾರೆಡ್ಡಿ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹರೀಶ್ ಎಂಬ ವ್ಯಕ್ತಿಯಿಂದ 5 ಲಕ್ಷ ಹಣ ಪಡೆದಿದ್ದ ಕಾಂಚನಾ ವಾಪಸ್ ನೀಡಿರಲಿಲ್ಲ. ಕಳೆದ 3 ವರ್ಷಗಳಿಂದ ಹಣ ವಾಪಸ್ ನೀಡುವುದಾಗಿ ಹೇಳುತ್ತಿದ್ದ ಕಾಂಚನಾ ಚೆಕ್ ಕೂಡ ನೀಡಿದ್ದಳು. ಆದರೆ ಈ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆ ದೂರು ಕೂಡ ದಾಖಲಾಗಿತ್ತು. ಈ ಸಂಬಂಧ ಇಂದು ಕೋರ್ಟ್ಗೆ ಕಾಂಚನಾ ಹಾಜರಾಗಿದ್ದಾಳೆ. ಇತ್ತ ಹರೀಶ್ ಪರ ವಕೀಲರಾಗಿರುವ ಕೃಷ್ಣರೆಡ್ಡಿ ಪ್ರಕರಣವನ್ನು ಮುಂದುವರಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣವನ್ನು ಮುಂದುವರಿಸುವುದಾಗಿ ಹೇಳಿದ ಹಿನ್ನೆಲೆ ಕಾಂಚನಾ ಕೋಪಗೊಂಡು ಕೋರ್ಟ್ ಒಳಗಿಂದ ಹೊರಬಂದಿದ್ದಾಳೆ. ಇತ್ತ ಕಲಾಪ ಮುಗಿಸಿದ ಬಳಿಕ ನ್ಯಾಯಾಲಯದ ಆವರಣಕ್ಕೆ ಬಂದ ಕೃಷ್ಣಾರೆಡ್ಡಿಯನ್ನು ತಡೆದ ಕಾಂಚನಾ, ಮತ್ತೆ ಕೇಸ್ ಮುಂದುವರಿಸುತ್ತಿಯಾ ಎಂದು ಹೇಳಿ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಘಟನೆಯಲ್ಲಿ ಕೃಷ್ಣರೆಡ್ಡಿ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಲ್ಲದೆ, ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.