ಡೈಲಿ ವಾರ್ತೆ:24 ಏಪ್ರಿಲ್ 2023

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.

ಬಿಬಿಎಂಪಿ‌ಯ ನಗರ ಯೋಜನಾ ವಿಭಾಗದ ಯಲಹಂಕ ವಲಯ ಕಚೇರಿಯ ಸಹಾಯಕ ನಿರ್ದೇಶಕ (ಎಡಿಟಿಪಿ) ನಾಗರಾಜ್ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಾಗರಾಜ್ ವಿರುದ್ಧ ಲೋಕಾಯುಕ್ತ ನಗರ ಪೊಲೀಸ್ ಘಟಕ ಪ್ರಕರಣ ದಾಖಲಿಸಿದೆ. ಆರೋಪಿಯ ಯಲಹಂಕದ ಮನೆ ಮೇಲೆ ನಸುಕಿನಲ್ಲೇ ದಾಳಿ ಮಾಡಿದ್ದು, ಶೋಧ ನಡೆಸುತ್ತಿದ್ದಾರೆ.

ನಾಗರಾಜ್ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಅಕ್ರಮವಾಗಿ ಸಂಗ್ರಹಿಸಿದ್ದ 80 ಲಕ್ಷ ಹಣ, 50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ನಾಗರಾಜಯ್ಯ ಅವರಿಗೆ ಸೇರಿದ ಯಲಹಂಕದಲ್ಲಿನ ಕಚೇರಿ, ಮಹಾಲಕ್ಷ್ಮಿ ಲೇಔಟ್’ನಲ್ಲಿನ ಸಂಬಂಧಿಗಳ ನಿವಾಸ ಹಾಗೂ ಕುರುಬರಹಳ್ಳಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ನಗದು ಪತ್ತೆಯಾಗಿದ್ದು ಅಧಿಕಾರಿಗಳು ಹಣ ಎಣಿಸುತ್ತಿದ್ದಾರೆ.

ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಿವೃತ್ತ ಡಿಸಿಎಫ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ‌ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಅವರ ಶಿಕಾರಿಪುರದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.ಹಾಗೂ ನಿವೃತ್ತ ಡಿಸಿಎಫ್ ನಾಗರಾಜ್ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ಇಬ್ಬರು ಅಧಿಕಾರಿಗಳ ಏಳು ಸ್ಥಳಗಳ ಮೇಲೆ ಏಕ ಕಾಲಕ್ಕೆ ರೇಡ್ ಆಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.

ಬೀದರ್’ನಲ್ಲಿ ದಾಳಿ:
ಬೀದರ್ ಜಿಲ್ಲೆಯಾದ್ಯಂತ 6 ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮುಡಬಿ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿಯವರ ಆನಂದ್ ನಗರ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಅವರು ಕಾರ್ಯನಿರ್ವಹಿಸುವ ಮುಡುಬಿಯ ಕಚೇರಿ ಹಾಗೂ ಬಸವಕಲ್ಯಾಣ ಪಟ್ಟಣದ ಹೊಂದಿರುವ ಗ್ಯಾರೇಜ್ ಮೇಲೂ ದಾಳಿ ಮಾಡಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ಸುರೇಶ್ ಮೇದಾ ಅವರ ಗುರುನಗರದ ನಿವಾಸ ಹಾಗೂ ನೌಬಾದ್‍ನಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಎ.ಆರ್ ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ ಓಲೇಕಾರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆದಿದೆ.

ಜೆಸ್ಕಾಂ ಎಇಇ ಗೆ ಗಾಳ:
ಬಳ್ಳಾರಿಯ ಜೆಸ್ಕಾಂ ಎಇಇ ಮನೆ ಮೇಲೆ ಬೆಂಗಳೂರು ಮತ್ತು ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಬಳ್ಳಾರಿಯ ಎಇಇ ಕಾರ್ಯನಿರ್ವಹಿಸುವ ಹುಸೇನ್ ಸಾಬ್ ಅವರ ಬುಡಾ ಕಾಂಪ್ಲೆಕ್ಸ್‌’ನಲ್ಲಿರುವ ಕಚೇರಿ ಹಾಗೂ ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಶಿಡಿಗಿನಮೊಳದಲ್ಲಿರುವ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಫಾರಂ ಹೌಸ್ ಮೇಲೆ ದಾಳಿ:
ಬಿಬಿಎಂಪಿ ಜೆಇಇಟಿ ಹನುಮಂತರಾಯ ಅವರ ಚಿತ್ರದುರ್ಗದ ಬೋಚಾಪುರದ ಫಾರಂ ಹೌಸ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.

ನಿವೃತ್ತ ಡಿಸಿಎಫ್ ನಾಗರಾಜ್ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸಿಎಫ್ ಅವರ ಶಿವಮೊಗ್ಗ ಮನೆ ಹಾಗೂ ತಹಶೀಲ್ದಾರ್ ಅವರ ಶಿಕಾರಿಪುರದ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಡಿಸಿಎಫ್ ಅವರ ದಾವಣಗೆರೆ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ಏಳು ಕಡೆ ದಾಳಿ ನಡೆದಿದ್ದು ಪರಿಶೀಲನೆ ನಡೆಸಲಾಗುತ್ತಿದೆ.